ರೋಬಾಟುಗಳು ಬಿಸ್ಕತ್ ತಿನ್ನುತ್ತವೆಯೇ?

ಕೊನೆಯದಾಗಿ ಬದಲಾಯಿಸಿದ್ದು: February 23, 2023 10:49 ಪ್ರದೀಪ್ ಬೆಳಗಲ್

ಮಿ. ಅಚಾನಕ್ ತನ್ನ ಬಾಲ್ಯದ ಗೆಳೆಯ ಮಿ. ಸಂದಂರ್ಭನನ್ನು, ಇಂಡಸ್‌ಟ್ರಿಯಲ್ ಏರಿಯಾದ ಅವನ ಫ್ಯಾಕ್ಟರಿಗೆ ಹೋಗಿ ಬೆಟ್ಟಿ ಮಾಡಬೇಕೆಂದು ನಿರ್ಧರಿಸಿದ. ಮಿ. ಸಂದರ್ಭನನ್ನು ಅವನು ಬೇಟಿಯಾಗಿ ಬಹಳ ಕಾಲವಾಗಿತ್ತು. ಪೋನ್‌ನ ಮಾತುಗಳಿಗೆ ಮಾತ್ರ ಅವಕಾಶವಾಗವಶ್ಟು ಇಬ್ಬರೂ ಬ್ಯುಸಿಯಾಗಿದ್ದರು. ಈ ತನ್ನ ಗೆಳೆಯ ತನ್ನ ಗೆಳೆಯರ ಗುಂಪಿನಲ್ಲಿಯೇ ಬುದ್ಧಿವಂತನೆಂತಲೂ, ದೇಶದ ಬಗೆಗೆ, ಕೈಗಾರಿಕೆಗಳ ಬಗೆಗೆ ಕಾಲೇಜು ದಿನಗಳಿಂದಲೇ ಇತರರಿಗಿಂತ ಭಿನ್ನವಾಗಿ ಚಿಂತಿಸುತ್ತಿದ್ದ ಎಂದು ಅಚಾನಕ್‌ಗೆ ಅಭಿಮಾನವೆಂದರೆ ಅಭಿಮಾನ. ಸಂದರ್ಭ ಬಿಸ್ಕಿತ್ ಫ್ಯಾಕ್ಟರಿಯೊಂದನ್ನು ಸ್ಥಾಪಿಸಿ ಎರಡು ಜಿಲ್ಲೆಗಳ ಮಾರುಕಟ್ಟೆಯಲ್ಲಿ ಬಾರ್ಲೆ ಬಿಸ್ಕತ್ ಕಂಪೆನಿಯಂತಹ ಬಹುರಾಶ್‌ಟ್ರೀಯ ಕಂಪೆನಿಗಳೊಂದಿಗೆ ಸೆಣೆಸಿ ಗೆದ್ದಿದ್ದ. ಯಶಸ್ವೀ ಕೈಗಾರಿಕೋಧ್ಯಮಿ, ಮಾಡೆಲ್ ಕೈಗಾರಿಕೋಧ್ಯಮಿ ಎಂದೆಲ್ಲ ಪ್ರಶಸ್ತಿಗಳನ್ನು ಪಡೆದುದನ್ನು ಅಚಾನಕ್ ಪತ್ರಿಕೆಗಳಲ್ಲಿ, ಟಿವಿಗಳಲ್ಲಿ ಓದಿ, ನೋಡಿದ್ದ. ಸಂದರ್ಭಕ್ಕೆ ತಕ್ಕಂತೆ ಹೊಂದಿಕೊಳ್ಳುವ ಅವನ ಗುಣ ಇವನಿಗೆ ಅಚ್ಚುಮೆಚ್ಚು. ಹೀಗಾಗಿ ಅವನು ಅಚಾನಕ್ಕಾಗಿ ತನ್ನ ಗೆಳೆಯನನ್ನು ನೋಡಲು ಹೊರಟೇಬಿಟ್ಟ.

ಅಚಾನಕ್ ಇಂಡಸ್‌ಟ್ರಿಯಲ್ ಎಸ್ಟೇಟ್‌ನ ಗೆಳೆಯನ ಕಂಪೆನಿ ಮುಂದೆ ಕಾರು ನಿಲ್ಲಿಸಿದಾಗ ಗೂರ್ಖಾ “ತಮ್ಮ ಹೆಸರೇನು?” ಎಂದು ಕೇಳಿದ. ಅಚಾನಕ್ ತನ್ನ ವಿಸಿಟಿಂಗ್ ಕಾರ್ಡ್ ಕೊಟ್ಟ. ಗೂರ್ಖಾ ಪೋನಾಯಿಸಿ ಗೇಟ್ ಬಾಗಿಲು ತೆಗೆದ. ಕಾರು ಆವರಣದ ಒಳಗೆ ನಿಲ್ಲಿಸಿ ಅಚಾನಕ್ ಆಫಿಸ್ ಪ್ರವೇಶಿಸಿದ. ಸುಂದರ ಯುವತಿಯೊಬ್ಬಳು “ಸರ್, ಸ್ವಲ್ಪ ಕುಳಿತುಕೊಳ್ಳಿ” ಎಂದು ಸೀಟು ತೋರಿಸಿದಳು. ಎಷ್ಟು ಸಂದರವಾದ ಯುವತಿ ಇವಳು, ಎಲ್ಲಿಂದ ತಂದ ಇವಳನ್ನು ಈ ಸಂದರ್ಭ ಎಂದು ಯೋಚಿಸುತ್ತಾ ಕುಳಿತ ಅಚಾನಕ್. ಆದರೆ ಅವಳ ದ್ವನಿಯನ್ನು ಎಲ್ಲೋ ಕೇಳಿದಂತೆ ಅವನಿಗೆ ಭಾಸವಾಯಿತು. ಎರಡು ನಿಮಿಷಗಳ ನಂತರ “ಸರ್ ಮೂರನೆಯ ಬಾಗಿಲಿನಿಂದ ಒಳಗೆ ಹೋಗಿ” ಎಂದು ಎರಡು ಮೂರು ಎಂದು ಬರೆದ ಬಾಗಿಲುಗಳತ್ತ ಆ ಸುಂದರಿ ಕೈ ತೋರಿಸಿದಳು.

ಒಳಗೆ ನೇರವಾಗಿ ಹೋದರೆ ಬಂದುದು ಗೆಳೆಯನ ಛೇಂಬರ್. ಗಾಜಿನ ಬಾಗಿಲು ತನ್ನಿಂದ ತಾನೇ ತೆರೆದುಕೊಂಡಿತು. ಸಂದರ್ಭ ಗೆಳೆಯನನ್ನು ಎದ್ದು ಬಂದು ಸ್ವಾಗತಿಸಿ, ಒಳ ಕರೆದುಕೊಂಡು ಹೋದ. ಇಬ್ಬರೂ ಕುಳಿತ ನಂತರ ಉಭಯ ಕುಶಲೋಪರಿ ಔಪಚಾರಿಕವಾಗಿ ನಡೆಯಿತು. ನಂತರ ತುಸು ಹೊತ್ತಿನಲ್ಲಿಯೇ ಈ ಹಿಂದೆ ಸ್ವಾಗತಿಸಿದ ಯುವತಿ ಎರಡು ಕಾಫಿ ಕಪ್ಪುಗಳನ್ನು ತಂದು ಕೊಟ್ಟು, ನಗೆ ಬೀರಿ ಹೊರಟು ಹೋದಳು.

ಕಾಫಿಯ ನಂತರ ಸಂದರ್ಭ “ನಡಿ, ಪ್ರಾಡಕ್ಶನ್ ಹೇಗೆ ನಡೆಯುತ್ತದೆ ನೋಡುವೆಯಂತೆ” ಎಂದು ಎದ್ದು ಅಚಾನಕ್‌ನನ್ನು ಪ್ರಾಡಕ್ಶನ್ ಯುನಿಟ್‌ಗೆ ಕರೆದುಕೊಂಡು ಹೋದ. ಅಲ್ಲಿ ಹಲವು ರೋಬಾಟ್‌ಗಳು ಇದ್ದವು. ಎಲ್ಲವೂ ಉತ್ಪಾದನೆಯ ವಿವಿಧ ಪ್ರಕ್ರಿಯೆಗಳನ್ನು, ತಯಾರಿಯಿಂದ ಪ್ಯಾಕಿಂಗ್‌ವರೆಗೂ ನಿಭಾಯಿಸುತ್ತಿದ್ದವು. ಅರೆ ಇದೇನೋ “ಒಂದು ಮುಖವೂ ಕಾಣುತ್ತಿಲ್ಲ” ಎಂದ ಅಚಾನಕ್. ಅದಕ್ಕೆ ಸಂದರ್ಭ “ಇದ್ದರಲ್ಲವೇ ಕಾಣೋಕೆ? ಇಲ್ಲಿ ಮನುಷ್ಯರೆಂದರೆ ಇಬ್ಬರೇ, ಹೊರಗಿನ ಗೂರ್ಖ ಮತ್ತು ನಾನು”

ಅಚ್ಚರಿಯಿಂದ ಅಚಾನಕ್ “ಹಾಗಾದರೆ, ಆ ಸುಂದರಿ…”

ಸಂದರ್ಭ “ಅದು ಮೆಶಿನ್, ಹೆಸರು ಲಕ್ಷ್ಮಿ” ಎಂದಾಗ ಅಚಾನಕ್‌ಗೇ ತೀವ್ರ ಅಚ್ಚರಿ. ಅನುಮಾದಿಂದಲೇ ಕೇಳಿದ “ಮುಖ ಸುಂದರಿಯಂತಿದೆ, ದ್ವನಿ ಸ್ವೀಟ್ ಆಗಿದೆ, ಕನ್ನಡದಲ್ಲಿಯೇ ನನ್ನೊಂದಿಗೆ ಮಾತನಾಡಿದಳು”. ಸಂದರ್ಭ ತಿದ್ದಿದ “ಮಾತನಾಡಿತು” ಎಂದು ನಂತರ ಹೇಳಿದ “ಹಲವು ಮಾಡೆಲ್‌ಗಳ ಮುಖಗಳ ಲಕ್ಷಣಗಳನ್ನು ಬಳಸಿ ತಯಾರದ ಮುಖ ಅದು. ದನಿ ಖ್ಯಾತ ಡಬ್ಬಿಂಗ್ ಕಲಾವಿದೆಯದನ್ನು ಹೋಲುತ್ತದೆ. ಸಿಂಗಪೂರದ ‘ನಾದಿನೆ’ (Nadine) ಮತ್ತು ಹಾಂಗ್‌ಕಾಂಗ್‌ನ ‘ಸೋಫಿಯಾ’ ರೊಬಾಟಿಕ್ಸ್‌ (robitics) ತಂತ್ರಗ್ನಾನದಲ್ಲಿಿ ಪರಿಚಿತ ಹೆಸರುಗಳು. ನಾದಿನೆ ತಂತ್ರಾಶದ ಆಧಾರದ ಮೇಲೆ ಲೋಕಲೈಜೇಶನ್ (localization) ಅಥವಾ ಇಲ್ಲಿನ ಸ್ಥಿತಿಗೆ ಹೊಂದಿಕೊಳ್ಳುವ ಹೆಚ್ಚುವರಿ ತಂತ್ರಾಶ ಬಳಸಲಾಗಿದೆ. ಕೃತಕ ಬುದ್ಧಿಮತ್ತೆ (artificial intelligence) ಬಳಸಿ ಕೆಲಸ ಮಾಡುತ್ತದೆ. ಕನ್ನಡ ಅರ್‍ಥ ಮಾಡಿಕೊಂಡು ಉತ್ತರಿಸ ಬಲ್ಲದು.”

ಅಚಾನಕ್‌ಗೆ ಈಗ ಅರ್ಥವಾಯಿತು ತನಗೆ ದನಿ ಎಲ್ಲಿಯೋ ಕೇಳಿದಂತೆ ಏಕೆ ಅನ್ನಿಸಿತು ಎಂದು. ಅಚಾನಕ್ “ಅಂದರೆ ಆ ಕಲಾವಿದೆಯ ದ್ವನಿಯನ್ನು ಟೇಪ್ ಮಾಡಿ…” ಅವನ ಮಾತುಗಳನ್ನು ಮಧ್ಯಕ್ಕೆ ತುಂಡರಿಸುತ್ತಾ ಸಂದರ್ಭ ಹೇಳಿದ “ಇಲ್ಲ ಇಲ್ಲ, ಆ ಡಬ್ಬಿಂಗ್ ಕಲಾವಿದೆಯ ದನಿ ಹೋಲುವಂತೆ ದನಿಯನ್ನು ಸಿಂಥೆಸೈಜ್ ಮಾಡಲಾಗಿದೆ. ದ್ವನಿ ಹೊರಡಿಸುವುದು ಈ ‘ಲಕ್ಷ್ಮಿಯೇ’ ನೂರಾರು ಸಂದರ್ಭಕ್ಕೆ ತಕ್ಕಂತೆ ಮಾತನಾಡಬಲ್ಲ ಲಕ್ಷ್ಮಿ ಎಲ್ಲವನ್ನೂ ಅರ್ಥಮಾಡಿಕೊಂಡು ವ್ಯವಹರಿಸುತ್ತದೆ. ಇಷ್ಟೆಲ್ಲ ಪ್ರೋಗ್ರಾಮಿಂಗ್ ಮಾಡಿ ಲಕ್ಷ್ಮಿ ‘ತಲೆಯಲ್ಲಿ’ ತುಂಬಲು ದುಡ್ಡು ತುಸು ಹೆಚ್ಚು ಅಶ್ಟೆ. ಮಾನವನನ್ನು ಹೋಲುವ ರೋಬಾಟ್‌ಗಳಿಗೆ ಹ್ಯೂಮನಾಯ್ಡ್ (humanoid) ಎಂಬ ಪದ ಉಪಯೋಗಿಸಲಾಗುತ್ತದೆ. ಅಂದರೆ ಮನುಶ್ಯನಲ್ಲ ಮಾನವನನ್ನು ಹೋಲುವ ರೊಬಾಟ್ ಎಂದು. ಇಲ್ಲಿ ನಾನು, ಗೂರ್ಖ ಹೊರತು ಎಲ್ಲವೂ ಹ್ಯುಮನಾಯ್ಡ್‌ಗಳು ಅಥವಾ ರೋಬಾಟ್‌ಗಳು”

ಅಚಾನಕ್ “ಹಾಗಾದರೆ ಕಾರ್ಮಿಕರು, ಕೆಲಸಗಾರರೂ ಎಂದು ಯಾರೂ ಇಲ್ಲ”

ಸಂದರ್ಭ “ಒಂದು ವರುಷ ಹಿಂದೆ ಎಲ್ಲರಿಗೂ ವಿಆರ್‌ಎಸ್ ನೀಡಿ ಮನೆಗೆ ಕಳುಹಿಸಿದೆ”

ಅಚಾನಕ್ “ಯಾರೂ ಕೆಲಸ ಬೇಕು ಎನ್ನಲಿಲ್ಲವೇ?”

ಸಂದರ್ಭ “ಆಕರ್ಷಕ ಸ್ವಯಂ ನಿವೃತ್ತಿ ಕೊಟ್ಟರೆ ಯಾರು ಬೇಡ ಎನ್ನುತ್ತಾರೆ, ನನಗೆ ಕೆಲಸಗಾರರೊಂದಿಗೆ ಅಂತಹ ತೊಂದರೆ ಏನೂ ಇರಲಿಲ್ಲ”

ಅಚಾನಕ್ “ಹಾಗಿದ್ದರೆ ಅವರನ್ನು ಕೆಲಸದಿಂದ ಏಕೆ ತೆಗೆದೆ?”

ಸಂದರ್ಭ “ಬೇರೆ ದಾರಿಯಿಲ್ಲ. ಕಾರ್ಮಿಕರು ಸೀಮಿತ ಸಮಯಕ್ಕೆ ಮಾತ್ರ ಕೆಲಸ ಮಾಡಬಲ್ಲರು, ಹೆಚ್ಚಿನ ಕೆಲಸ ಎಂದರೆ ಓವರ್‌ಟೈಮ್, ಹೆಚ್ಚಿನ ಪಾಳಿಗಳು, ಹೆಚ್ಚಿನ ಕಾರ್ಮಿಕರು, ಹೀಗೆ ಖರ್ಚು ಹೆಚ್ಚುತ್ತಾ ಹೋಗುತ್ತದೆ. ಬೇರೆಯ ಕಂಪೆನಿಗಳು ಖರ್ಚು ಕಡಿಮೆ ಮಾಡುತ್ತಿರ ಬೇಕಾದರೆ ನಾನು ಹೆಚ್ಚು ಮಾಡಿದರೆ ಸ್ಪರ್ಧೆಯಲ್ಲಿ ಉಳಿಯುವುದಾದರೂ ಹೇಗೆ?”

ಅಚಾನಕ್ “ಹಾಗಾದರೆ ನಿಮ್ಮ ಪ್ರತಿಸ್ಪರ್ಧಿ ಬಾರ್ಲೆ ಕಂಪೆನಿಯನ್ನೂ ಹಿಂದಿಕ್ಕ ಬಹುದು”

ಸಂದರ್ಭ “ಅದು ಅಸಾಧ್ಯ, ನಾನು ಕೇವಲ ಎರಡು ಜಿಲ್ಲೆಗಳಲ್ಲಿ ಮಾತ್ರ ನನ್ನ ಮಾರುಕಟ್ಟೆಯಾಗಿಸಿಕೊಂಡಿದ್ದರಿಂದ ಉಳಿದುಕೊಂಡೆ, ಹೆಚ್ಚಿಸಲು ಪ್ರಯತ್ನಿಸಿದರೆ ಆ ಬಹುರಾಶ್‌ಟ್ರೀಯ ಕಂಪೆನಿಗಳ ಮುಂದೆ ಉಳಿಗಾಲವಿಲ್ಲ. ಬೆಲೆ ಅರ್ಧಮಾಡಿಯಾದರೂ ನನ್ನನ್ನು ದಿವಾಳಿ ಮಾಡಬಲ್ಲರು.”

ಅಚಾನಕ್ “ಈ ರೋಬಾಟ್‌ಗಳಿಗೆ ಏನಾದರೂ ರಿಪೇರಿ ಬಂದರೆ?”

ಸಂದರ್ಭ ನಕ್ಕು “ಪಕ್ಕದ ರೂಮಿನಲ್ಲಿ ಮಾಸ್ಟರ್ ರೋಬಾಟ್ ಇದೆ, ಅದು ಎಲ್ಲ ರಿಪೇರಿ ಮಾಡಬಲ್ಲದು ಹಾಗೂ ಉತ್ಪಾದನೆ ಲೆಕ್ಕ ಇಡ ಬಲ್ಲದು, ಕೆಲಸಗಾರ ರಾಬಟ್‌ಗಳ ಕೆಲಸದ ಅವಧಿಯನ್ನು ಉತ್ಪಾದನೆಯ ಗುರಿಯ ಆಧಾರದ ಮೇಲೆ ಹೆಚ್ಚು ಕಡಿಮೆ ಮಾಡಿ ಕೆಲಸ ಹಂಚಬಲ್ಲದು.”

ನಾವು ಮಾಸ್ಟರ್ ರೋಬಾಟ್ ರೂಮಿಗೆ ಹೋದೆವು. ಅಚಾನಕ್ “ಬೇರೆ ಕಂಪೆನಿಗಳೂ ರೋಬಾಟ್ ಬಳಸುತ್ತಿವೆಯೇ?”

“ಹೌದು, ಕಾರು, ಮೋಟಾರ್‌ಸೈಕಲ್, ಲಾರಿ ಉಧ್ಯಮಗಳು, ಗಾರ್‌ಮೆಂಟ್ ಉಧ್ಯಮ ಹೀಗೆ ಬಹುತೇಕ ಉದ್ಯಮಗಳು ಈಗಾಗಲೇ ಆಟೋಮೈಸ್ ಆಗಿವೆ, ಬೇರೆಯ ಉದ್ಯಮಗಳು ಆ ದಾರಿಯಲ್ಲಿಯೇ ಇವೆ. ಉತ್ಪಾದನೆ ವೆಚ್ಚ ಕಡಿಮೆ ಮಾಡಿ ಇತರ ಕಂಪೆನಿಗಳೊಂದಿಗೆ ಸ್ಪರ್ದಿಸಲು ಇದಲ್ಲದೆ ಬೇರೆ ದಾರಿಯೇ ಇಲ್ಲ”

ಅಚಾನಕ್ “ಇದು ತೀರಾ ಅತಿಯಾಯಿತು”

ಸಂದರ್ಭ “ಅಷ್ಟೇ ಅಲ್ಲ ಕೇಳು, ಕಾರುಗಳು ತಮಗೆ ತಾವೇ ಚಲಿಸುತ್ತವೆ, ಅವುಗಳಿಗೆ ಡ್ರೈವರ್ ಅಗತ್ಯವಿರುವುದಿಲ್ಲ (driver-less or automated vehicles). ಸೆನ್ಸಾರ್‌ಗಳನ್ನು ಆಳವಡಿಸಿ ವಾಹನದ ಹಿಂದೆ, ಮುಂದೆ, ಅಕ್ಕ, ಪಕ್ಕ ಬರುವ ವಾಹನಗಳನ್ನು, ಇತರ ವಸ್ತುಗಳನ್ನು ಗುರುತಿಸಿ ವೇಗವನ್ನು ನಿಯಂತ್ರಿಸಿ ಚಲಾಯಿಸ ಬಹುದು. ‘ಕ್ರೂಸಿ’ (Crusie) ಸ್ವಯಂಚಾಲಿತ ಕಾರು ಈಗಾಗಲೆ ಅಮೆರಿಕದಲ್ಲಿ ಟ್ರಯಲ್‌ಗೆ ಬಂದಿದೆ. ಹಾಗೆಯೇ ನ್ಯೂಸ್‌ ರೀಡರ್‌ಗಳೂ ಮುಂದೆ ಅನಗತ್ಯವಾಗುತ್ತಾರೆ. ಕೃತಕ ಬುದ್ಧಿಮತ್ತೆಯ ವರ್ಚುಯಲ್ ರೀಡರ್‌ಗಳು (virtual news readers with Artificial Intelligence)ಟಿವಿಯಲ್ಲಿ ಬರುತ್ತವೆ. ಅವು ಎಲ್ಲ ರೀತಿಯ ಸುಂದರ, ಸುಂದರಿಯರ ಮುಖಾರವಿಂದಗ‌ಳ ಲಕ್ಷಣಗಳನ್ನು ಹೊಂದಿ, ಅತಿ ಉತ್ತಮವಾದ ಸಂಯೋಜಿತ ದನಿ ಹೊಂದಿರುತ್ತವೆ. ಈಗಾಗಲೇ ಚೀನಾ, ದಕ್ಷಿಣ ಕೊರಿಯಾ, ವಿಯೆಟ್ನಾಂಗಳಲ್ಲಿ ಇಂತಹ ಪ್ರಯತ್ನಗಳನ್ನು ಮಾಡಲಾಗಿದೆ. ಹೀಗೆ ಎಲ್ಲವೂ ಆಟೋಮೈಸ್ ಈಗಿನ ಟ್ರೆಂಡ್”

ಅಚಾನಕ್ “ಇವನ್ನೆಲ್ಲ ಕಂಪ್ಯೂಟರ್ ಭಾಶೆಯಲ್ಲಿ ಬರೆಯಲು ಹೆಚ್ಚು ಹೆಚ್ಚು ನುರಿತ ಸಾಫ್ಠವೇರ್ ತಂತ್ರಗ್ನರು (software engineers) ಬೇಕಾಗುತ್ತಾರೆ. ಅವರಿಗೆ ಹೆಚ್ಚು ಹೆಚ್ಚು ಸಂಬಂಳ ಕೊಡಬೇಕಾಗುತ್ತದೆ!! ಅಲ್ಲವೇ?”

ಸಂದರ್ಭ “ಕಂಪ್ಯೂಟರ್ ತಿಳಿಯುವ ಭಾಶೆಯಲ್ಲಿ ಬರೆಯಲು ಮುಂದೆ “ಹೆಚ್ಚು” ಅಲ್ಲ “ಕಡಿಮೆ” ಅರಿತವರೇ ಸಾಕಾಗುತ್ತಾರೆ. ಈಗಿನ ಸಾಫ್ಠವೇರ್ ತಂತ್ರಜ್ಞರ ಭಯವೆಂದರೆ ಎಲ್ಲಿ ಚಾಟ್-ಜಿಪಿಟಿ (chatGPT)ತಮ್ಮ ಕೆಲಸವನ್ನು ಕಸಿದುಕೊಳ್ಲುತ್ತವೆಯೋ ಎಂದು!! ”

ಅಚಾನಕ್ “ಅಬ್ಬಾ. ಇನ್ನೂ ಏನೇನು ಬರಲಿದೆಯೇ? ಹಾಗಾದರೆ ಈಗ ನಿನ್ನ ಕಾರ್ಖಾನೆ 24 ತಾಸು ನಡೆಯುತ್ತದೆ”

ಸಂದರ್ಭ “ಇಲ್ಲ, ಉತ್ಪಾದನೆಯ ಕ್ಯಾಪಿಸಿಟಿಯ ಶೇ 50ರಷ್ಟು ಮಾತ್ರವೇ ಉತ್ಪಾದನೆ ಮಾಡುತ್ತಿದ್ದೇವೆ”

ಅಚಾನಕ್ “ಹಾಗೇಕೆ?”

ಸಂದರ್ಭ “ಇದು ಮಾತ್ರ ನನಗೆ ಅರ್ಥವಾಗುತ್ತಿಲ್ಲ”

ಅಚಾನಕ್ “ಮಾಸ್ಟರ್ ರೋಬಾಟ್‌ನ ಕೇಳಬಾರದೇಕೆ?”

ಸಂದರ್ಭ ಮಾಸ್ಟರ್ ಕಂಪ್ಯೂಟರ್‌ನ್ನು ಕೇಳಿದ. ಕಡಕ್ ಉತ್ತರ ಬಂತು “ಫ್ಯಾಕ್ಟರಿಯ ಉತ್ಪಾದನೆ ಮುಂದಿನ ಒಂದು ತಿಂಗಳ ಡಿಮೆಂಡ್ ಮೇಲೆ ಆಧಾರಪಟ್ಟಿದೆ, ಅಲ್ಲದೆ ಇಪ್ಪತ್ತು ದಿನಗಳಿಗಾವಶ್ಟು ಸ್ಟಾಕ್ ಗೋದಾಮಿನಲ್ಲಿ ದಾಸ್ತಾನು ಇದೆ. ಇನ್ನೂ ದಾಸ್ತಾನಿಗೆ ಉಳಿದ ಸ್ಥಳ ಶೇ 10ರಶ್ಟು ಮಾತ್ರ, ಹೀಗಾಗಿ ಹೆಚ್ಚಿನ ಉತ್ಪಾದನೆ ಮಾಡಿದರೆ ದಾಸ್ತಾನಿಗೆ ಬೇರೆ ಗೋದಾಮು ಬೇಕಾಗುತ್ತದೆ. ನನಗೆ ಆದೇಶ ಇರುವ ಉತ್ಪಾದನಾ ಲೆಕ್ಕ ಈ ಗೋದಾಮಿಗಶ್ಟೇ ಸೀಮಿತ.”

ಸಂದರ್ಭ ಅಚಾನಕ್ ಕಡೆ ತಿರುಗಿ “ಈ ಉತ್ಪಾದನೆ ಕಳೆದ ಮೂರು ವರುಶದ ಹಿಂದಿರುವಶ್ಟೂ ಇಲ್ಲ”

ಅಚಾನಕ್ “ಮಾಸ್ಟರ್ ರೋಬಾಟ್ ಕೇಳು ನೋಡೋಣ ಏನು ಹೇಳುತ್ತದೆ?”

ಸಂದರ್ಭ ರೋಬಟ್‌ಗೆ ಪ್ರಶ್ನಿಸಿದ “ನಾನು ಫ್ಯಾಕ್ಟರಿ ಉತ್ಪಾದನೆ, ಡಿಮೆಂಡ್‌ಗೆ ಸಂಬಂಧಿಸದ ಪ್ರಶ್ನೆಗಳಿಗೆ ಮಾತ್ರ ಉತ್ತರಿಸಬಲ್ಲೆ, ನಿಮ್ಮ ಪ್ರಶ್ನೆ ಮಾರ್ಕೆಟ್ ಅನಾಲಾಸಿಸ್‌ಗೆ ಸಂಬಂಧಿಸಿದುದು.”

ಸಂದರ್ಭನ ಮುಖ ಕೆಂಪಾಯಿತು. ಅಚಾನಕ್ ಕೇಳಿದ “ಸರಿಯಯ್ಯಾ ನಿನ್ನ ಮಾರುಕಟ್ಟೆ ಈ ಸುತ್ತಮುತ್ತಲಿನ ಜಿಲ್ಲೆಗಳದೇ ಅಲ್ಲವೇ?”

ಸಂದರ್ಭ “ನಿಜ”

“ಅಲ್ಲಿ ವಾಸಿಸುವ ಬಹುತೇಕ ಮಂದಿ ಈ ಸುತ್ತಮುತ್ತಲ ಪ್ರದೇಶದ ಕಾರ್ಮಿಕರೇ ಅಲ್ಲವೇ”

“‘ಕಾರ್ಮಿಕರೇ’ ಎನ್ನುವುದು ಈಗ ಪಾಸ್ಟ್‌ಟೆನ್ಸ್”

“ಅಂದರೆ?”

“ಒಮ್ಮೆ ಬಹುತೇಕ ಜನರು ಕಾರ್ಮಿಕರೇ ಆಗಿದ್ದರು, ನನ್ನಂತೆ ಬಹುತೇಕ ಎಲ್ಲಾ ಕೈಗಾರಿಕೆಗಳು ಆಟೋಮೈಜೇಶನ್ ಆದ ನಂತರ ಅಲ್ಲಿನ ಕೆಲಸ ಮಾಡುತ್ತಿರುವವರ ಸಂಖ್ಯೆ ಈಗ ತೀರಾ ಕಡಿಮೆ ”

“ಸರಿಯಯ್ಯಾ ನಿನ್ನ ಬಿಸ್ಕತ್ತಿಗೆ ಮಾರುಕಟ್ಟೇ ಇದೇ ಅಲ್ಲವೇ? ಈಗ ಅವರು ನಿರುದ್ಯೋಗಿಗಳು, ನೀನು ಕಾರ್ಮಿಕರನ್ನು ಮನೆಗೆ ಕಳುಹಿಸಿದಂತೆ ಇತರ ಕೈಗಾರಿಕೆಗಳು ಕಾರ್ಮಿಕರನ್ನು ಮನೆಗೆ ಕಳುಹಿಸಿದ್ದಾರೆಯಲ್ಲವೇ?
ಕೈಯಲ್ಲಿದ್ದ ಹಣ ಖರ್ಚಾದನಂತರ ನಿರುದ್ಯೋಗಿ ಕಾರ್ಮಿಕರ ಕೈಯಲ್ಲಿ ಏನನ್ನಾದರೂ ಕೊಳ್ಳಲು ಹಣ ಎಲ್ಲಿಂದ ಬರುತ್ತದೆ? ”

“!”

“ತಿನ್ನುವವರ ಕೈಯಲ್ಲಿ ಹಣವಿಲ್ಲ, ಇನ್ನು ನಿನ್ನ ಉತ್ಪಾದನೆ ಕೊಳ್ಳುವವರು ಯಾರು? ನಿನ್ನ ರೋಬಾಟ್‌ಗಳು ಬಿಸ್ಕತ್ ತಿನ್ನುತ್ತವೆಯೇ?”


Leave a Reply

Your email address will not be published. Required fields are marked *


ಇತರ ಲೇಖನಗಳು


.