ಲಿಂಗ ಸ್ವರೂಪದ ವಿಕಾಸ

ಕೊನೆಯದಾಗಿ ಬದಲಾಯಿಸಿದ್ದು: January 16, 2023 08:39 ಪ್ರದೀಪ್ ಬೆಳಗಲ್

ಭಾರತೀಯ ಧಾರ್ಮಿಕ ಪರಂಪರೆಯಲ್ಲಿ ಲಿಂಗವು ಹಿಂದೂ ತ್ರಿಮೂರ್ತಿಗಳಲ್ಲಿ ಒಬ್ಬನಾದ ಶಿವನ ಅಮೂರ್ತ ರೂಪವೆಂದೇ ಪರಿಗಣಿತವಾಗಿದೆ, ಪವಿತ್ರ ಎಂದು ಪೂಜಿಸಲ್ಪಡುತ್ತಿದೆ. [1] ಲಿಂಗಗಳನ್ನು ದೇವಾಲಯಗಳಲ್ಲಿ ಸ್ಥಾವರ ಲಿಂಗಗಳಾಗಿ, ವೈಯಕ್ತಿಕವಾಗಿ ಚರ ಹಾಗೂ ಇಷ್ಟಲಿಂಗಗಳ ಮೂಲಕ ಪೂಜಿಸಲಾಗುತ್ತಿದೆ. ಸಾಂಪ್ರದಾಯಿಕವಾಗಿ ಲಿಂಗವನ್ನು ಅಗ್ನಿ ಕಂಬಕ್ಕೆ ಹೋಲಿಸಲಾಗಿದ್ದು, ಲಿಂಗವು ಜಗತ್ತಿನ ಪುನರುತ್ಪಾದನೆಯನ್ನು ಪ್ರತಿನಿಧಿಸುತ್ತದೆ ಎಂದು ಸಹ ಭಾವಿಸಲಾಗುತ್ತಿತ್ತು. ನಂತರದಲ್ಲಿ ಲಿಂಗವನ್ನು ಶಿವ ಮತ್ತು ಪಾರ್ವತಿಯ ಮಿಲನ, ಎರಡು ತತ್ತ್ವಗಳ ಮಿಲನವೆಂಬ ನಂಬಿಕೆ ವಿಕಾಸವಾಯಿತು. ಲಿಂಗದ ಪರಿಕಲ್ಪನೆ, ಅರ್ಚನೆ, ಹಿಂದಿರುವ ತತ್ತ್ವಜ್ಞಾನಗಳ ಅಧ್ಯಯನವು ಒಂದು ಸವಾಲೇ ಸರಿ ಮತ್ತು ಅದು ಸಾಕಷ್ಟು ವಿಭಿನ್ನ ನಿಲುವುಗಳನ್ನು ಹುಟ್ಟು ಹಾಕುವ ಸಾಧ್ಯತೆಯೇ ಹೆಚ್ಚು. ಆಗಮಗಳು ಹಲವು ರೀತಿಯ ಲಿಂಗಗಳನ್ನು ಪ್ರಸ್ತಾಪಿಸುತ್ತವೆ. ಇಲ್ಲಿ ಮಾನುಷ (ಮಾನವ ನಿರ್ಮಿತ) ಲಿಂಗಗಳಿಗೆ ಸೀಮಿತವಾಗಿ ಲಿಂಗದ ಶಿಲ್ಪದ ಸ್ವರೂಪದಲ್ಲಿನ ವಿಕಾಸವನ್ನು ಗುರುತಿಸಲು ಪ್ರಯತ್ನಸಲಾಗಿದೆ. ಇಂತಹ ಪ್ರಯತ್ನವು ತತ್ವ್ತಶಾಸ್ತ್ರ, ಆಚರಣೆಗಳ ಬದಲಾವಣೆಗಳನ್ನು ಗುರುತಿಸಲು ಸೂಚಕವಾಗ ಬಹುದು. ಹಾಗೆಯೇ ಯಾವುದೇ ನಿರ್ದಿಷ್ಟ ಪ್ರದೇಶದಲ್ಲಿನ ಇಂತಹ ವಿಕಾಸವನ್ನು ಗುರುತಿಸಿದಾಗ, ಭಾಗಶಹ ವಾದರೂ ಶೈಲಿಯ ಆಧಾರದ ಮೇಲೆ ಲಿಂಗಗಳ ಕಾಲಮಾನ ಗುರುತಿಸು ಅವಕಾಶವೊಂದು ತೆರೆದುಕೊಳ್ಳುತ್ತದೆ. ಇಂತಹ ಕಾಲಮಾನ ಗುರುತಿಸುವಿಕೆಯು ಪರಿಪೂರ್ಣವಲ್ಲದಿದ್ದರೂ ಸಾಕ್ಷೇಪಿಕ ಅಂಶಗಳನ್ನು ಸೂಚಕವಾಗಿ ಬಳಸಲು ಅನುವು ಮಾಡಿಕೊಡುತ್ತದೆ.

‘ಲಿಂಗ’ ಪದಕ್ಕೆ ಸಂಸ್ಕೃತ-ಕನ್ನಡ ಶಬ್ದಕೋಶವು ಹಲವು ಅರ್ಥಗಳನ್ನು ಕೊಡುತ್ತದೆ. ಅವುಗಳಲ್ಲಿ ಪ್ರಮುಖವಾದವು- ಚಿಹ್ನೆ, ಲಕ್ಷಣ, ವೇಷ, ಸೋಗು, ಸ್ತ್ರೀಪುರುಷರ ಗುರುತು, ಕಾರಣ (ಅಥವಾ ಹೇತು, -ತರ್ಕದಲ್ಲಿ), ಗಂಡಿನ ಜನನೇಂದ್ರಿಯ, ಪರಶಿವನ ರೂಪ (ಈ ಕ್ರಮದಲ್ಲಿ).[2]

ತರ್ಕದಲ್ಲಿ ಲಿಂಗ ಪದವನ್ನು ನಿರ್ದಿಷ್ಟ ಅರ್ಥದಲ್ಲಿ ಬಳಸಲಾಗುತ್ತದೆ ಮತ್ತು ಇದು ಅನುಮಾನಕ್ಕೆ (inference) ಸಂಬಂಧಿಸಿದೆ. ಇದು ಪ್ರತಿಪಾದನೆ ಯೊಂದರಲ್ಲಿನ ಹೇಳಿಕೆ ಗುರುತು ಅಥವಾ ಲಿಂಗದ ಆಧಾರದ ಮೇಲಿರುತ್ತದೆ. ಉದಾಹರಣೆಗೆ ಬೆಟ್ಟ ಒಂದರಲ್ಲಿ ಹೊಗೆ ಕಾಣಿಸಿಕೊಳ್ಳುತ್ತದೆ ಎಂದಾದರೆ; ಹೊಗೆಯು ಬೆಂಕಿಯಿಲ್ಲದೆ ಕಾಣಿಸಿಕೊಳ್ಳಲಾರದು. ಇಲ್ಲಿಯ ತರ್ಕದಲ್ಲಿ ಹೊಗೆ ಲಿಂಗ ಅಥವಾ ಹೇತು. ಯಾವುದರ ಬಗೆಗೆ ಹೇಳಲಾಗುತ್ತದೆಯೋ ಅದು ಪೂರ್ವಪಕ್ಷ (ಇಲ್ಲಿ ಬೆಟ್ಟ) ಮತ್ತು ‘ಬೆಂಕಿ’ ಪದವನ್ನು ಸಾಧ್ಯ ಎನ್ನಲಾಗುತ್ತದೆ.(Dasgupta1922: 343) ರುಗ್‌ವೇದದಲ್ಲಿ ಬರುವ «ಶಿಶ್ನದೇವ} ಪದಕ್ಕೆ ಯಾಸ್ಕ (ಕಾಲಮಾನ: ಕ್ರಿ ಪೂ 5-6 “}) «ಬ್ರಹಚರ್ಯ ಪಾಲಿಸದವರು
[3] (ಸಾಯಣನ ನಿಲುವು ಬಹುತೇಕ ಇದೇ) ಎಂಬ ಅರ್ಥ ಕೊಡುತ್ತಾನೆ (Kane 1941: 706-707). ಆದರೆ ಇಂದು ಹಲವರು ಈ ಸಂಪ್ರದಾಯಿಕ ನಿಲುವನ್ನು ಒಪ್ಪುವುದಿಲ್ಲ ಎನ್ನುತ್ತಾರೆ ಚಕ್ರವರ್ತಿ (Chakravarathi 1986: 124). ಇಲ್ಲಿ ಗುರುತಿಸ ಬೇಕಾದ ಅಂಶವೆಂದರೆ ನೇರವಾಗಿ ಲಿಂಗ ಪೂಜೆಯನ್ನು ಒಪ್ಪದಿದ್ದಾಗ್ಯೂ ಅದರ ಬಗೆಗಿನ ವಿರೋಧ ಯಾಸ್ಕನ ಕಾಲಕ್ಕೆ ಕಡಿಮೆಯಾಗಿತ್ತು ಎಂದು ಇದು ಸೂಚಿಸುತ್ತದೆಯೇ? ಪಾಣಿನಿಯ ಅಷ್ಟಾಧ್ಯಾಯಿಯು -ಈ ನಿಯಮವು (ಯಾವುದು ಕೊಳ್ಳಲ್ಪಡುತ್ತದೆ ಮತ್ತು ಯಾವುದು ಅಲ್ಲ) ವಿಗ್ರಹಗಳನ್ನು ಮನೆ ಮನೆಗೆ ತಿರುಗಿ ಪ್ರದರ್ಶಿಸಿ ಜೀವನ ಭರಣ ಮಾಡುವವರಿಗೆ (ಅನ್ವಯಿಸುತ್ತದೆ). ಉದಾಹರಣೆಗೆ ವಾಸುದೇವ, ಶಿವ, ಸ್ಕಂದ … ವಿಗ್ರಹಗಳು ಎಂದು ಹೇಳುತ್ತದೆ (Vasu 1897: 975-chpater II, verse 99). ಈ ಮೂಲಕ ಈ ದೇವತೆಗಳ ವಿಗ್ರಹಗಳು ಇದ್ದವು ಎಂದು ಸೂಚಿಸುತ್ತದೆ. ಪಾಣಿನಿಯ ಕಾಲಕ್ಕೆ ಶಿವನನ್ನು ಅವನ ವಿಗ್ರಹ ಅಥವಾ ಪ್ರತಿಕೃತಿ ಪ್ರತಿನಿಧಿಸುತ್ತಿತ್ತು ಸಂಕೇತವಲ್ಲ (ಲಿಂಗವಲ್ಲ) ಎನ್ನುತ್ತಾರೆ ಚಕ್ರವರ್ತಿ (Chakravarthi 1986:125).

ಲಿಂಗದ ಸ್ವರೂಪ ಮೊದಲು ಹೇಗಿತ್ತು ಎಂಬುದರ ಬಗೆಗೆ ಎರಡು ಅಭಿಪ್ರಾಯಗಳಿವೆ. ಮೊದಲನೆಯದು ಲಿಂಗವು ಗಂಡಿನ ಜನನಾಂಗವನ್ನು ಪ್ರತಿನಿಧಿಸುತ್ತದೆ ಎಂದು ಮತ್ತು ಎರಡನೆಯದು ಶಿವನು ಯಜ್ಞದ ಅಗ್ನಿಯನ್ನು ಪ್ರತಿನಿಧಿಸುತ್ತಾನೆ, ಲಿಂಗವು ಅದನ್ನು ಉತ್ಪಾದಿಸುವ ಅರಣಿಯನ್ನು ಪ್ರತಿನಿಧಿಸುತ್ತದೆ ಎಂಬುದು. ಈ ಎರಡೂ ದೃಷ್ಟಿಕೋನಕ್ಕೆ ಬೆಂಬಲವಾಗಿ ಹಲವು ಖ್ಯಾತನಾಮರು ವಾದಿಸಿದ್ದಾರೆ. ಲಿಂಗವು ಆರಂಭದಲ್ಲಿ ಶಿಶ್ನ ರೂಪವಾಗಿತ್ತು ಎಂಬ ವಾದ ಮಂಡಿಸಿದವರಲ್ಲಿ ಸರ್ ಮಾರ್ಟೈಮರ್ ವೀಲರ್, ಆರ್ ಜಿ ಭಂಡಾರ್‌ಕರ್, ಕೆ. ಎ. ಗೋಪಿನಾಥ ರಾವ್ ಮತ್ತು ಜೆ. ಎನ್ ಬ್ಯಾನರ್ಜಿ ಮುಂತಾದವರು ಇದ್ದರೆ, ಎರಡನೆಯ ನಿಲುವಿಗೆ ಬೆಂಬಲವಾಗಿ ಕೆ ಎ ನೀಲಕಂಠಶಾಸ್ತ್ರಿ, ಎ ಪಿ ಕರ್ಮರಕರ್, ಸ್ವಾಮಿ ವಿವೇಕಾನಂದ ಮುಂತಾದವರು ಇದ್ದಾರೆ (Parekh 1978:34). ಹಿಂದೆ ಬೆಂಕಿಯನ್ನು ಎರಡು ಮರದ ತುಂಡುಗಳನ್ನು ಬಳಸಿ ಉತ್ಪಾದಿಸಲಾಗುತ್ತಿತ್ತು ಮತ್ತು ಮೇಲೆ ಇರುವ ಮರದ ತುಂಡನ್ನು ಕೆಳಗಿನದರ ಮೇಲೆ ಉಜ್ಜುವುದು ಈ ಪ್ರಕ್ರಿಯೆಯ ಭಾಗವಾಗಿತ್ತು. ಬಹುಶಹ ಕೆಲವರಿಗೆ ಇದು ಮಾನವನ ಪುನರುತ್ಪಾದನೆಯನ್ನು (reproduction) ನೆನಪಿಸಿರ ಬೇಕು, ಹಾಗೆಂದು ಬೃಹದಾರಣ್ಯಕ ಉಪನಿಷತ್‌ನಲ್ಲಿ ಹೇಳಲಾಗಿದೆ ಎನ್ನುತ್ತಾರೆ ಚಕ್ರವರ್ತಿಯವರು (Chakravarthi 1986:122). ಮಹಾಭಾರತದ ಸೌಪ್ತಿಕಪರ್ವ ಅಧ್ಯಾಯ 17ರಲ್ಲಿ ಕೃಷ್ಣನು ಶರ್ವನ (ಶಿವ) ಲಿಂಗ ಭೂಮಿಗೆ ಪ್ರವೇಶಿಸುವ ಕಾರಣವನ್ನು ಹೀಗೆ ತಿಳಿಸುತ್ತಾನೆ. «ಸೃಷ್ಟಿಯು ಬೇರೊಬ್ಬರಿಂದ ಆಗಿ ಪ್ರಜೆಗಳು ತಮ್ಮದೇ ತೇಜಸ್ಸಿನಿಂದ ವೃದ್ಧಿಸುತ್ತಿರುವದನ್ನು ನೋಡಿದ ರುದ್ರನು ಕ್ರೋದದಿಂದ ತನ್ನ ಲಿಂಗವನ್ನು ಬಿಸುಟನು. ಹೀಗೆ ಬಿಸುಟ ಲಿಂಗವು ಭೂಮಿಯಲ್ಲಿ ಪ್ರತಿಷ್ಟಿತವಾಯಿತು.» (ಸೌಪ್ತಿಕಪರ್ವ-ಐಶೀಕಪರ್ವ: 61-62).

ಗಂಡಿನ ಜನನಾಂಗವನ್ನು (ಹಾಗೆಯೆ ಹೆಣ್ಣಿನ ಜನನಾಂಗವನ್ನು, ಉದಾ: ಲಜ್ಜಾಗೌರಿ) ಹಲವು ಸಮಾಜಗಳು ಪೂಜಿಸುತ್ತಿದ್ದವು ಎಂದು ಹಲವರು ವಾದಿಸಿದ್ದಾರೆ. ಹೀಗಾಗಿ ಇದು ಭಾರತಕ್ಕೆ ಮಾತ್ರ ಸೀಮಿತವಾದುದಲ್ಲ. ಆದರೆ ‘ಶಿಶ್ನದೇವ’ ಎಂಬ ರುಗ್‌ವೇದದಲ್ಲಿನ ನುಡಿಗಟ್ಟು ಯಾರ ಬಗೆಗೆ ಹೇಳುತ್ತದೆ ಎಂಬುದಾಗಲಿ, ಲಿಂಗ ಪದದ ಸಂಬಂಧವು ಸಂತಾಲ ಭಾಷೆಯ ಲಂಗುಲ (ಮಡಕೆ/plough) ನಡುವಿನ ಸಂಬಂಧದ ಬಗೆಗೆಯಾಗಲಿ ಖಚಿತವಾಗಿ ಏನನ್ನಾದರೂ ಹೇಳುವುದು ಕಷ್ಟವೇ ಸರಿ. ಈ ಬಗೆಗಿನ ಯಾವುದೇ ಪ್ರಮೇಯ (ಹೈಪೊಥೀಸಿಸ್) ತೀರ ತೆಳುವಾಗಿರುತ್ತದೆ.

ಹಿಂದೆ ಮತ್ತು ಇಂದೂ ಸಹ ಹಲವು (ಭಾರತೀಯ ಮತ್ತು ಪಾಶ್ಚಿಮಾತ್ಯ) ವಿದ್ವಾಂಸರು ಶಿವನ ಸಂಬಂಧವನ್ನು ಸಿಂಧೂ ನಾಗರೀಕತೆಯೊಂದಿಗೆ ಕಲ್ಪಿಸುತ್ತಾರೆ. ಇಂತಹ ವಾದವು ಬಹುತೇಕ ಸಿಂಧೂ ಸಂಸ್ಕೃತಿಯು ಪತ್ತೆಯಾದಗಿನಿಂದಲೂ ಇದೆ. ಆದರೆ ಇತ್ತೀಚೆಗೆ ಕೆಲವು ವಿದ್ವಾಂಸರು ಇಂತಹ ಸಂಬಂಧದ ಬಗೆಗೆ ಕೆಲವು ಅನುಮಾನಗಳನ್ನು ವ್ಯಕ್ತಪಡಿಸಿದ್ದಾರೆ. ಶ್ರೀನಿವಾಸನ್ ಡೋರಿಸ್ ಅವರು ಸಿಂಧೂ ಸಂಸ್ಕೃತಿಯ ಮುದ್ರೆಯನ್ನು ಪ್ರೋಟೋ-ರುದ್ರ ಎಂದು ಗುರುತಿಸುವಲ್ಲಿ ನಾಲ್ಕು ಅಂಶಗಳು- ಮುಖದ ಅಲಂಕಾರ, ಕುಳಿತ ಭಂಗಿ, ಮುಖ ಮತ್ತು ಪ್ರಾಣಿಗಳು ಪ್ರಮುಖ ಪಾತ್ರವಹಿಸುತ್ತವೆ ಎಂದು ಹೇಳುತ್ತಾ ಅವನ್ನು ಪುನಪರಿಶೀಲಿಸ ಬೇಕಾದ ಅಗತ್ಯವಿದೆ ಎಂದು ವಾದಿಸುತ್ತಾರೆ (Srinivasan 1984:78). ಈ ನಾಲ್ಕು ಅಂಶಗಳಲ್ಲಿ ಕನಿಷ್ಟ ಮೂರಕ್ಕೆ ಭಿನ್ನವಾದ ವಿವಣೆಗಳನ್ನು ಒದಗಿಸಲು ಸಾಧ್ಯ ಎಂದು ಅವರು ಭಾವಿಸುತ್ತಾರೆ. ಲಿಂಗದ ಸ್ವರೂಪದ ಬಗೆಗೆ ಅವರ ವಾದವು ಇಲ್ಲಿ ಮುಂದೆ ಹೇಳಿದ ಮಿಟ್ಟರ್‌ವೆಲ್ನರ್ ವಾದದವನ್ನು ಪ್ರಮುಖವಾಗಿ ನೆಚ್ಚಿಕೊಂಡಂತೆ ಭಾಸವಾಗುತ್ತದೆ.(Srinvasan 1984:84) ಇಂದು ಅಲ್ಪಸಂಖ್ಯಾತ ಎಂದು ಹೇಳಬಹುದಾದ ಈ ನಿಲುವು ಸಹ ರುದ್ರ-ಶಿವರ ಸಿಂಧೂ ಸಂಸ್ಕೃತಿಯ ಸಂಬಂಧವನ್ನು ದುರ್ಬಲಗೊಳಿಸುತ್ತದೆಯಾದರೂ ಪೂರ್ಣವಾಗಿ ತಪ್ಪೆಂದು ತೋರಿಸಿಕೊಡುವುದಿಲ್ಲ. ರುದ್ರ-ಶಿವ ಎಂದು ಭಾವಿಸಲಾದ ಮುದ್ರೆಯಲ್ಲಿನ ಕುಳಿತ ಭಂಗಿಗೆ ಮಹತ್ವ ಇರಬಹುದು (ಇಂದು ಕೆಲವರು ಗ್ರಹಿಸದಂತೆ ಅಲ್ಲದಿದ್ದರೂ) ಎನ್ನುವ ಸಾಧ್ಯತೆಯ ಬಗೆಗಿನ ನಿಲುವನ್ನು ಲೇಖಕರು ಉಲ್ಲೇಖಿಸುತ್ತಾರೆ.(Srinvasan 1984:83) ಈ ಬಗೆಗೆನ ವಾದವಿವಾದಗಳಿಗೆ ಬಾಗಶಹ ಕಾರಣ ಸಿಂಧೂ ಲಿಪಿ ಎಲ್ಲರಿಗೂ ಒಪ್ಪಿಗೆಯಾಗುವಂತೆ ಓದದಿರುವುದು ಮತ್ತು ಸಿಂಧೂ ಸಂಸ್ಕೃತಿ ಕೊನೆ ಹಾಗೂ ಲಿಂಗಗಳು ಪೂಜ್ಯ ವಸ್ತುಗಳಾಗಿ ಕಾಣಿಸಿಕೊಳ್ಳುವ ಕಾಲಮಾನಗಳ ನಡುವಿನ ದೊಡ್ಡ ಅಂತರ ಎಂದು ಯಾರಿಗಾದರೂ ಅನಿಸಬಹುದು. ಇಂದೂ ಸಹ ಇಂತಹ ಸಂಬಂಧ, ಪೂರ್ಣವಾಗಿ ತಿರಸ್ಕೃವಾಗದಿದ್ದಾಗ್ಯೂ, ಹಲವು ಸಾಧ್ಯ ಊಹೆಗಳ ಮೇಲೆ ಆಧಾರ ಪಟ್ಟಿದೆ ಎಂಬುದನ್ನು ಮರೆಯಬಾರದು.

ಭಾರತೀಯ ಉಪಖಂಡದಲ್ಲಿ ದೊರೆತ ಪ್ರಾಚೀನ ಲಿಂಗವು ಆಂಧ್ರಪ್ರದೇಶದ (ರೇಣುಗುಂಟ ಹತ್ತಿರದ) ಗುಡಿಮಲ್ಲಂನಲ್ಲಿ ಕಂಡುಬಂದಿದ್ದು ಇದರ ಕಾಲಮಾನವನ್ನು ಸಾಮಾನ್ಯವಾಗಿ ಕ್ರಿ ಪೂ 2 ಹಾಗೂ 1 ರ ನಡುವೆ ಇರಿಸಲಾಗುತ್ತದೆ. ಈ ಲಿಂಗವು ಸ್ಪಷ್ಟವಾಗಿಯೇ ಶಿಶ್ನವನ್ನು ಹೋಲುತ್ತದೆ. ಅಷ್ಟೇ ಅಲ್ಲ ಇಂತಹ ಲಿಂಗಗಳು ಪೂಜೆಗೆ ಒಳಗಾತ್ತಿದ್ದವು ಎಂಬುದನ್ನು ಸಹ ಉಬ್ಬುಶಿಲ್ಪಗಳು ತೋರಿಸಿಕೊಡುತ್ತವೆ.

ಟಿ ಎ ಗೋಪಿನಾಥ್ ರಾವ್ 1916ರಷ್ಟು ಹಿಂದೆಯೇ ಲಿಂಗಗಳ ಬಗೆಗೆ ತೀರ ವಿವರವಾಗಿ ಚರ್ಚಿಸುತ್ತಾ ಚಲ (ಚರ) ಮತ್ತು ಅಚಲ (ಸ್ಥಾವರ) ಲಿಂಗಗಳೆರಡನ್ನೂ ಹೇಳುತ್ತಾರೆ (Gopinath Rao 1916:73). ಅಚಲ ಲಿಂಗಗಳನ್ನು ಮಕುಟಾಗಮ ದೈವಿಕ, ಆರ್ಶ(ಕ), ಗಣಪ ಹಾಗೂ ಮಾನುಷ ಲಿಂಗಗಳು ಎಂದು ವರ್ಗೀಕರಿಸುತ್ತದೆ. (Gopinath Rao 1916:80)[4] ಇಲ್ಲಿ ಮಾನುಷ ಲಿಂಗಗಳ ಬಗೆಗೆ ಮಾತ್ರ ಚರ್ಚಿಸಲಾಗಿದೆ. ಹಲವು ಮದ್ಯಕಾಲೀನ ಕೃತಿಗಳಂತೆ ಸಿದ್ಧಾಂತಸಾರಾವಳಿಯು ಸಹ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಮತ್ತು ಶೂದ್ರರಿಗೆ ರುದ್ರ, ವಿಷ್ಣು, ಬ್ರಹ್ಮಭಾಗಗಳ ಬೇರೆ ಬೇರೆ ಅಳತೆಯನ್ನು ಕೊಡುತ್ತದೆ.(Gopinath Rao 1916:88)

ಇಲ್ಲಿಯ ಉದ್ಧೇಶವು ಲಿಂಗಗಳಲ್ಲಿ ಕಾಲಕಾಲಕ್ಕೆ ಉಂಟಾಗುವ ಬದಲಾವಣೆಗಳ ಸ್ವರೂಪವನ್ನು ಗುರುತಿಸಲು ಪ್ರಯತ್ನಿಸುವುದು. ಮೂಲತಹ ಯಾವುದನ್ನು ಬ್ರಹ್ಮಸೂತ್ರ ಎಂದು ಕರೆಯಲಾಗುತ್ತದೆಯೋ ಅದರ ವಿಕಾಸ ಹಾಗೂ ಬದಲಾಗುವ ಪೀಠಗಳ ಸ್ವರೂಪವನ್ನು ಗುರುತಿಸಲು ಪ್ರಯತ್ನಿಸುವುದು. ಮೊದಲನೆಯದರ ಪ್ರಯತ್ನ ಈಗಾಗಲೇ ನಡೆದಿದೆ. ಪೀಠಗಳ ಸ್ವರೂಪವನ್ನು 12ನೆಯ-13ನೆಯ ಶತಮಾನದ ಕಾಲ ಘಟ್ಟದಲ್ಲಿ ಸ್ಥಿರಗೊಂಡಿರುವ ಸಾಧ್ಯತೆ ಇದೆ ಎಂದು ಕಂಡು ಬರುತ್ತದೆ. ಹಾಗೆಯೇ ಬ್ರಹ್ಮಸೂತ್ರದ ಸ್ವರೂಪ ಕಾಲದಲ್ಲಿಯಷ್ಟೇ ಅಲ್ಲ ಪ್ರಾಂತೀಯವಾಗಿ ಭಿನ್ನವಾಗಿದೆಯೇ ಎಂಬುದು ಸಹ ಅಧ್ಯಯನ ಮಾಡಬಹುದು. ಅದೇನೆ ಇರಲಿ, ನಂತರದ ಕಾಲಮಾನದ ಬಗೆಗೆ ಮಾಹಿತಿ ದೊರೆಯದೆ ಏನನ್ನಾದರೂ ಖಚಿತವಾಗಿ ಹೇಳಲು ಸಾಧ್ಯವಾಗುವುದಿಲ್ಲ. ಇಲ್ಲಿನ ಗ್ರಹಿಕೆ ಎಷ್ಟರಮಟ್ಟಿಗೆ ಸರಿ ಎಂಬುದನ್ನು ಹೆಚ್ಚಿನ ಸಂಶೋಧನೆಗಳು ಹೇಳಬಲ್ಲವು. ಆರಂಭದಲ್ಲಿಯೇ ಮಿಟ್ಟರ್‌ವಾಲ್ನರ್ ಹೇಳುತ್ತಾರೆ. (Mitterwallner 1984:12)«ಎಲ್ಲಾ ನಿಯಮಗಳಿಗೆ ಹೊರತಾದ ಉದಾಹರಣೆಗಳು ದೊರೆಯುತ್ತವೆ ಮತ್ತು ಒಮ್ಮೆ ಆಸ್ತಿತ್ವಕ್ಕೆ (invented) ಬಂದವೆಂದರೆ ಭಿನ್ನ ರೀತಿಯ ಲಿಂಗಗಳು ಅಕ್ಕಪಕ್ಕದಲ್ಲಿಯೇ ಇರಬಹುದು ಸಹ.»

ಇಂತಹ ಬದಲಾವಣೆಯ ಸಾಧ್ಯತೆಯನ್ನು ಡಾ. ವನ್ನಾಪತ್ ರ್ವಾಂಗ್‌ಸುಪ್ (ಶ್ರೀಮತಿ ವನ್ನಾಪತ್ ಪ್ರೆಂಚ್) ಅವರು ತಮ್ಮ ಡಾಕ್ಟೋರಲ್ ಥೀಸಿಸ್‌ ನಲ್ಲಿ ಥೈಲೆಂಡಿನಲ್ಲಿ ಆಗುವ ಹಿಂದೂ ದೇವತೆಗಳ ಬದಲಾವಣೆಯ ಹಿನ್ನೆಲೆಯಲ್ಲಿ ಅನುಶಂಗಿಕವಾಗಿ ಭಾರತದಲ್ಲಿನ ಲಿಂಗಗಳನ್ನೂ ಒಳಗೊಂಡು ಶಿವನ ಮೂರ್ತಿ ರೂಪ, ವಿಷ್ಣು, ಗಜಲಕ್ಷ್ಮಿ, ಗಣಪತಿ ಮುಂತಾದ ದೇವತೆಗಳ ಬದಲಾವಣೆಯನ್ನು ಗುರುತಿಸುತ್ತಾರೆ. ಅಲ್ಲಿ ಅವರು ಲಿಂಗಗಳ ವರ್ಗೀಕರಣವನ್ನು ಬಳಸುತ್ತಾರೆ (Wannapat 2013).[5] ಮೂಲತಹ ಈ ವರ್ಗೀಕರಣವನ್ನು ರ್ವಾಂಗ್‌ಸುಪ್ ಹೇಳಿದಂತೆ ಡಾ. (ಶ್ರೀಮತಿ- ಲೇಟ್) ಗ್ರಿಟ್ಲಿ ಮಿಟ್ಟರ್‌ವಾಲ್ನರ್ ಅವರು ತಮ್ಮ «ಎವ್ಯೂಲ್ಯೂಶನ್ ಆಫ್ ದಿ ಲಿಂಗ»ದಲ್ಲಿ ಸೂಚಿಸುತ್ತಾರೆ (Mitterwallner 1984:12). ವಾಸ್ತವದಲ್ಲಿ ರ್ವಾಂಗ್‌ಸುಪ್ ಅವರು ಮಿಟ್ಟರ್‌ವಾಲ್ನರ್ ಅವರ ಲಿಂಗಗಳ ಸ್ವರೂಪದ ಕಾಲಮಾನದ ಬದಲಾವಣೆಗಳನ್ನು ಥೈಲ್ಯಾಂಡ್‌ನ ಹಿನ್ನೆಲೆಯಲ್ಲಿ ಬಹುತೇಕ ದಕ್ಷಿಣ ಏಶಿಯಕ್ಕೂ ಸಂಬಂಧಿಸಿ ಗುರುತಿಸುತ್ತಾರೆ (ಲಿಂಗ ಮಾತ್ರವಲ್ಲ ಉಳಿದ ದೇವತೆಗಳ ಶಿಲ್ಪಗಳನ್ನೂ ತಾಯೈಲೆಂಡ್ ಹಿನ್ನೆಲೆಯಲ್ಲಿ ಚರ್ಚಿಸುತ್ತಾರೆ).

ಇಂತಹ ಬದಲಾವಣೆಯ ಸಾಧ್ಯತೆಯ ಬಗೆಗೆ ಮಧುರ ಚೆನ್ನರು 1930ರಷ್ಟು ಹಿಂದೆ ಕನ್ನಡಿಗರ ಗಮನ ಸೆಳೆದಿದ್ದಾರೆ. ಲಿಂಗದ ತುದಿಯು ಕೊಡೆಯಾಕರವಾಗಿದ್ದುದು ಅದನ್ನುರಾಮಬಾಣ ಎಂದು ಊಹಿಸಿದಂತೆ ತೋರುತ್ತದೆ. ಈ ಹಿನ್ನೆಲೆಯಲ್ಲಿ ಅವರು ಹೀಗೆ ಹೇಳುತ್ತಾರೆ. «ಗುಡಿಮಲ್ಲಂ ಲಿಂಗವು ರಾಮಬಾಣದ ಸಮಸ್ಯೆಯನ್ನು ನಿವಾರಣೆಗೊಳಿಸಿತು. ಅದು ಕೇವಲ ಲಿಂಗಾಗ್ರದ ನಿದರ್ಶಕ ಚಿಹ್ನವು. ಇದಕ್ಕೆ ಆಗಮಗಳಲ್ಲಿ ಬ್ರಹ್ಮಸೂತ್ರವೆಂದು ಹೇಳುದುದಾಗಿ ಶ್ರೀ ಗೋಪಿನಾಥ ರಾಯರು ಬರೆಯುತ್ತಾರೆ. ಇದನ್ನು ನೋಡಿದರೆ ಲಿಂಗಾಗ್ರದ ಸ್ಪಷ್ಟಾಕಾರವು ಕಲೆಯಲ್ಲಿ ಮಾಯವಾಗಿ ಬರೇ ಗೆರೆಯ ರೂಪಕ್ಕೆ ಬಂದ ಕಾಲದಲ್ಲಿ ಈ ಆಗಮಗಳು ಈಗಿನ ರೂಪಕ್ಕೆ ಬಂದವೆಂದು ಸಿದ್ಧವಾಗುವುದು. .. »(ಮಧುರ ಚೆನ್ನ 1930:64). ಅಷ್ಟು ಮುಂಚೆ ಹಾಗೆ ಊಹಿಸುದುದು (ಬೇರೆಯವರೂ ಊಹಿಸಿರಲು ಸಾಧ್ಯ-ಗೋಪಿನಾಥ್ ರಾವ್‌ ಅವರ ಅಧ್ಯಯನ ಇಂತಹ ಸಾಧ್ಯತೆಯನ್ನು ತೆರೆದಿಡುತ್ತದೆ.) ಸ್ಪಷ್ಟವಾಗಿಯೇ ಇದು ಒಂದು ಮುಂಗಾಣುವಿಕೆ ಎಂದು ನಾನು ಭಾವಿಸುತ್ತೇನೆ. ಮಿಟ್ಟರ್‌ವಾಲ್ನರ್ ಇದನ್ನು ಒಂದು ಪ್ರಮೇಯವಾಗಿ ಮಂಡಿಸುತ್ತಾರೆ.

ಬ್ರಹ್ಮಸೂತ್ರದಲ್ಲಾದ ಬದಲಾವಣೆಗಳು

ಮಿಟ್ಟರ್‌ವಾಲ್ನರ್ ಅವರು ಐದು ಹಂತಗಳ ಬದಲಾವಣೆಗಳನ್ನು ಸೂಚಿಸುತ್ತಾರೆ.

  1. ಒಂದನೇ ಹಂತ- ಕ್ರಿ ಪೂ 1ನೇ ಶತಮಾನದಿಂದ ಕ್ರಿ ಶ 1ನೇ ಶತಮಾನ.
  2. ಎರಡನೇ ಹಂತ- ಕ್ರಿ ಶ 1ನೇ ಶತಮಾನದಿಂದ ಕ್ರಿ ಶ 4ನೆಯ ಶತಮಾನ
  3. ಮೂರನೆಯ ಹಂತ- ಕ್ರಿ ಶ 4ನೆಯ ಶತಮಾನದಿಂದ ಕ್ರಿ ಶ 5ನೆಯ ಶತಮಾನ
  4. ನಾಲ್ಕನೆಯ ಹಂತ- ಕ್ರಿ ಶ 5ನೆಯ ಶತಮಾನದಿಂದ ಆರಂಭಿಕ ಮಧ್ಯಕಾಲೀನದ ಕೊನೆ
  5. ಐದನೆಯ ಹಂತ- ತಡವಾದ ಮದ್ಯಕಾಲೀನ ಯುಗದಿಂದ 20ನೆಯ ಶತಮಾನದ ಕೊನೆ.

ಹಂತ ಒಂದು: (ಕ್ರಿ ಪೂ 1ನೇ ಶತಮಾನದಿಂದ ಕ್ರಿ ಶ 1ನೆಯ ಶತಮಾನದ) ಸ್ಥೂಲವಾಗಿ ಈ ಹಂತದಲ್ಲಿ ಗುಡಿಮಲ್ಲಂ ಲಿಂಗವಲ್ಲದೆ (ನೋಡಿ ಚಿತ್ರ 1) ಭೀಟಾ ಲಿಂಗವನ್ನೂ ಇರಿಸಲಾಗಿದೆ. ಭೀಟಾ ಲಿಂಗವು (ಉತ್ತರ ಪ್ರದೇಶ) ಬಹುಮುಖಗಳದಾಗಿದ್ದು ಇನ್ನೂ ಮೂಲ ಗಂಡು ಜನನಾಂಗದ ರೂಪ ಕಳೆದುಕೊಂಡಿಲ್ಲ. ಆ ಕಾಲಕ್ಕೆ ಲಿಂಗಗಳನ್ನು ಪೂಜಿಸಲಾಗುತ್ತಿತ್ತು ಎಂದು ಉಬ್ಬು ಚಿತ್ರ 2 ಮತ್ತು ಚಿತ್ರ 3 ತೋರಿಸುತ್ತವೆ. ಚಿತ್ರ 2 ಉಬ್ಬುಶಿಲ್ಪದಲ್ಲಿ ಲಿಂಗವು ಗುಡಿಮಲ್ಲಂ ಲಿಂಗವನ್ನೇ ಹೋಲುತ್ತದೆ ಎಂಬುದನ್ನು ಗಮನಿಸಿ. ಚಿತ್ರ 3ರ ಮಾಹಿತಿ ಹೆಚ್ಚು ಆಸಕ್ತಿದಾಯಕ.

ಟಿಟ್ವರ್ ಒಂದರಲ್ಲಿ (ಟ್ವಿಟರ್-ಕುಮಾರ ಕಂಪನ@ಗೋಪನಾರ್ಯ- Kamana 2018) ಯವನ, ಶಕ, ಕುಶಾಣರು ಮತ್ತು ಹೂಣರನ್ನು ಸಮಾಜದೊಳಗೆ ಹಿಂಗಿಸಿಕೊಳ್ಳುವ ಪ್ರಕ್ರಿಯೆ ಎಂದು ಸರಿಯಾಗಿಯೇ ಗುರುತಿಸಲಾಗಿದೆ. ಇದು ಕೇವಲ ಶೈವ ಧರ್ಮಕ್ಕಷ್ಟೇ ಸೀಮಿತವಾಗಿರಲಿಲ್ಲ, ಈ ಹಿನ್ನೆಲೆಯಲ್ಲಿ ಕ್ರಿ ಪೂ 2ನೆಯ ಶತಮಾನದ ಬೆಸನಗರ್ (ಗ್ವಾಲಿಯರ್) ಶಾಸನವು ವಸುದೇವನ ಗೌರವಾರ್ಥವಾಗಿ ಗರುಡದ್ವಜವನ್ನು ಹಿಲಿಯೋಡರಸನು (ಯವನ) ನಿಲ್ಲಿಸಿದ ವಿಷಯವನ್ನು ತಿಳಿಸುತ್ತದೆ ಎಂಬುದನ್ನು ಗಮನಿಸ ಬಹುದು (ಸರ್ಕಾರ್ 1998: 96). ಭಾಗವತ ಧರ್ಮ ಹಾಗೂ ವಿಗ್ರಹ ಪೂಜೆ ಸಂಪ್ರದಾಯದ ಭಾಗವಾಗುವುದು ಸುಲಭವೇನೂ ಆಗಿರಲಿಲ್ಲ, ಎನ್ನುವ ದಾಸ್‌ಗುಪ್ತಾ ಪಂಚರಾತ್ರ ಪಂಥದವರ ಮೇಲಿನ ಇನ್ನೊಂದು ಆರೋಪವೆಂದರೆ (ಅ ಪಂಥ ವಿಗ್ರಹ ಪೂಜೆ ಮಾಡುತ್ತದೆ ಎಂಬುದು ಮೊದಲನೆಯದು) ಅದು ಹೆಂಗಸರನ್ನು, ಶೂದ್ರರನ್ನು ಪಂಥದಲ್ಲಿ ಸೇರಿಸಿಕೊಳ್ಳುತ್ತದೆ ಎನ್ನುವುದು (Dasgupta 1952:19-20) ಎನ್ನುತ್ತಾರೆ. ಕೂರ್ಮ ಪುರಾಣ ಅಧ್ಯಾಯ 16ರಲ್ಲಿ ಬರುವ ಕಥೆಯು ಗೌತಮ ಮುನಿಯ ಶಾಪದಿಂದಾಗಿ ಬ್ರಾಹ್ಮಣರು ವೇದಬಾಹ್ಯವಾದ ‘ಕಾಪಾಲ, ನಾಕುಲ, ವಾಮ, ಭೈರವ, ಪೂರ್ವ-ಪಶ್ಚಿಮ ಪಂಚರಾತ್ರ, ಈ ಬಗೆಗಿನ ಪಾಶುಪತ ಮತ್ತು ಇತರ ಸಹಸ್ರಾರು ಶಾಸ್ತ್ರಗ(ಳ)’ಗೆ ವಶರಾಗಿ, ವೇದಬಾಹ್ಯರಾಗಿ ನರಕದಲ್ಲಿ ಬೀಳತ್ತಾರೆ ಎಂದು ಹೇಳುತ್ತದೆ (ಪಾಟಣಕರ 1946:332-335 (ಅಧ್ಯಾಯ-16)).

Trulliಚಿತ್ರ 1. ಗುಡಿಮಲ್ಲಂ ಲಿಂಗ, ಆಂಧ್ರಪ್ರದೇಶ, ಕಾಲಮಾನ: ಕ್ರಿ ಪೂ 2 ರಿಂದ 1 ಚಿತ್ರ ಕೃಪೆ: ರ್ವಾಂಗ್‌ಸುಪ್. Trulli

ಚಿತ್ರ 2. ಗಂಧರ್ವರು ಶಿವಲಿಂಗ ಪೂಜಿಸುತ್ತಿರುವುದು- ಶುಂಗಾ ಕಾಲಮಾನ ಭೂತೇಶ್ವರ –ಉಬ್ಬು ಚಿತ್ರ (ಮಥುರಾ ಮ್ಯೂಸಿಯಂ) ಚಿತ್ರ ಕೃಪೆ: ಬಿಸ್ವರೂಪ್‌ ಗಂಗೂಲಿ, ವಿಕಿಮೀಡಿಯಾ ಕಾಮನ್ಸ್ (Title: Worship of Shiva Linga by Gandharvas – Shunga Period – Bhuteshwar – – Government Museum – Mathura) (ಭಾಗಶಹ ಚಿತ್ರ) ಶುಂಗಾ ಕಾಲಮಾನ –ಕ್ರಿ ಪೂ 2 ರಿಂದ 1ನೆಯ ಶತಮಾನ.

Trulli

ಚಿತ್ರ 3. ಕುಶಾನರ ಕಾಲದ ಶಿವಲಿಂಗ-ಪೂಜೆ ಶಕ ಭಕ್ತರಿಂದ ಉಬ್ಬು ಚಿತ್ರ (ಕಾಲಮಾನ: ಕ್ರಿ ಶ 1 ರಿಂದ 2) ಚಿತ್ರ ಕೃಪೆ: ಬಿಸ್ವರೂಪ್ ಗಂಗೂಲಿ, ವಿಕಿಮೀಡಿಯ ಕಾಮನ್ಸ್. ಈ ಉಬ್ಬು ಚಿತ್ರದಲ್ಲಿ ಪೂಜಿಸುವವರನ್ನು ಶಕರು ಎಂದು ಸ್ಪಷ್ಟವಾಗಿಯೇ ಗುರುತಿಸಲಾಗಿದೆ.

Trulli

ಚಿತ್ರ 4: (ಎಡಕ್ಕೆ) ಕನ್‌ಕಲಿ ತಿಲಾ (ಉತ್ತರ ಪ್ರದೇಶ) ನೈಜ ಲಿಂಗ (ಕಾಲಮಾನ: ಕುಶಾನ) ಚಿತ್ರ 5: (ಬಲಕ್ಕೆ) ಆಗಾಪುರದ ಏಕಮುಖ ಲಿಂಗ ಎರಡೂ ಚಿತ್ರಗಳ ಕೃಪೆ: ರ್ವಾಂಗ್‌ಸುಪ್ಸ್.

Trulli

ಚಿತ್ರ 6: ಕಾರಮಂಡ (ಉತ್ತರ ಪ್ರದೇಶ) ಲಿಂಗ ಕಾಲಮಾನ ಶಾಸನದ ಪ್ರಕಾರ ಕ್ರಿಶ 436 ಅಥವಾ ಗುಪ್ತ ಕಾಲ 117 ಚಿತ್ರ 7: ಅರ್ವೆಲಮ್ ಲಿಂಗ (ಗೋವಾ) ಎರಡೂ ಚಿತ್ರ ಕೃಪೆ: ರ್ವಾಂಗ್‌ಸುಪ್.

Trulli

ಚಿತ್ರ 8: ಶಿವಲಿಂಗ, ಅಲಂಪುರ, ಬದಾಮಿ ಚಾಲುಕ್ಯರ ನಿರ್ಮಾಣ ಕಾಲಮಾನ: ಕ್ರಿ ಶ 7-8 ನೆಯ ಶತಮಾನ ಚಿತ್ರ ಕೃಪೆ: ರ್ವಾಂಗ್‌ಸುಪ್.

Trulli

ಚಿತ್ರ 9: ಪಟ್ಟದಕಲ್, ಶಿವಲಿಂಗ ಬದಾಮಿ ಚಾಲುಕ್ಯರ ಕಾಲಮಾನ: ಕ್ರಿ ಶ 7-8 ನೆಯ ಶತಮಾನ, ಬದಾಮಿ ಚಾಲುಕ್ಯರ ನಿರ್ಮಾಣ ಚಿತ್ರ ಕೃಪೆ: ರ್ವಾಂಗ್‌ಸುಪ್.

Trulli

ಚಿತ್ರ 10: (ಎಡಕ್ಕೆ) ‌ಬ್ರಿದೇಶ್ವರ ದೇವಾಲಯ ಲಿಂಗ, ತಾಂಜವೂರು, ಕಾ: ಕ್ರಿ ಶ 10-11 ಶತಮಾನ, ಚಿತ್ರ ಕೃಪೆ: ರ್ವಾಂಗ್‌ಸುಪ್ ಚಿತ್ರ 11: (ಬಲಕ್ಕೆ) ಭೋಜೇಶ್ವರ ಲಿಂಗ, ಭೋಜಪುರ, ಮದ್ಯಪ್ರದೇಶ, ಕಾ: ಕ್ರಿ ಶ 11ನೆಯ ಶತಮಾನ ಚಿತ್ರ ಕೃಪೆ, ಮಾಹಿತಿ: ವಿಕಿಪೀಡಿಯ, ವಿಕಿಪೀಡಿಯ ಕಾಮನ್ಸ್, Author: Yann, Title: Lingam of Bhojpur temple, Raisen district, MP, India.

Trulli

ಚಿತ್ರ 12: (ಎಡಕ್ಕೆ) ಲಿಂಗದ ಪೂಜಾಭಾಗ ಮತ್ತು ಪೀಠ, (ಚಿತ್ರ ರಾವ್‌ ಅವರ ವಿವರಣೆಯನ್ನಾಧರಿಸಿದ ವಿವರಣೆ ನನ್ನದು).

Trulli

ಚಿತ್ರ 13: (ಮದ್ಯ) ಲಿಂಗದ ಮೂರು ಭಾಗಗಳು.

Trulli

ಚಿತ್ರ 14: (ಬಲಕ್ಕೆ) ಅಷ್ಟೋತ್ತರ-ಶತ-ಲಿಂಗ- (108 ಲಿಂಗಗಳ ಲಿಂಗ), ಸಂಕೀರ್ಣ ಲಿಂಗಗಳು ಚಿತ್ರಗಳ (13, 14, 15) ಕೃಪೆ: ಗೋಪಿನಾಥ್‌ ರಾವ್, ಚಿತ್ರ 13- ಪ್ಲೇಟ್ X, ಚಿತ್ರ 14, 15 -ಪ್ಲೇಟ್ VII.

Trulli

ಚಿತ್ರ 15: ಲಿಂಗದ ಪೀಠಗಳು ಮತ್ತು ಅದರ ಛೇದನ -horizontal cross section (AB) , ನಾಲದ ಎತ್ತರ (DE), ನಾಲದ ಕೊನೆ (CD). ಚಿತ್ರ ಮತ್ತು ವಿವರಣೆಯ ಕೃಪೆ: ಗೋಪಿನಾಥ ರಾವ್, ಪ್ಲೇಟ್ XI

Trulli

ಚಿತ್ರ 16: ಕಜುರಹ+++306222222222222
ಚಿತ್ರ 17: ಧಾರ-ಲಿಂಗ, ತಿರೂವೊರ್ರಿಯೂರು (ಚಿತ್ರ ಕೃಪೆ: ಗೋಪಿನಾಥ್ ರಾವ್, ಪ್ಲೇಟ್ 10, ಚಿತ್ರ-3)

Trulli

ಚಿತ್ರ 18. ಮಿಟ್ಟರ್‌ವಾಲ್ನರ್ ಗುರುತಿಸಿದಂತೆ ಶಿಶ್ನದ ತುದಿ ಕೇವಲ ಗೆರೆಗಳಾಗಿ ಕಾಲಮಾನದಲ್ಲಿ ಬದಲಾದ ಪರಿ (ಚಿತ್ರ ಹಾಗೂ ವಿವರಣೆ ಕೃಪೆ: Mitterwalner, 1984: ಪು 19).

ಈ ಉಬ್ಬು ಚಿತ್ರದಲ್ಲಿ ಪೂಜಿಸುವವರನ್ನು ಶಕರು ಎಂದು ಸ್ಪಷ್ಟವಾಗಿಯೇ ಗುರುತಿಸಲಾಗಿದೆ.

ಹಂತ ಎರಡು:(1ನೆಯ ಶತಮಾನದಿಂದ 4ನೆಯ ಶತಮಾನ) ಈ ಹಂತದಲ್ಲಿ ಲಿಂಗವು ನೈಜ್ಯ ಸ್ವರೂಪ ಇನ್ನೂ ಉಳಿಸಿಕೊಂಡು ಬಹುತೇಕ ತ್ರಿಕೋನದ ತುದಿಯೊಂದಿಗೆ ಕಂಡು ಬರುತ್ತದೆ. ಕನ್‌ಕಲಿ ತಿಲಾ (ಮಥುರಾ) (ಚಿತ್ರ 4) ಮತ್ತು ಆಗಾಪುರ ಲಿಂಗಗಳು (ಚಿತ್ರ 5) ಕುಶಾನರ ಕಾಲಮಾನದವು (ಗಮನಿಸಿ ಇವು ಮಾನವ ಜನನಾಂಗವನ್ನು ಹೆಚ್ಚು ಹೋಲುತ್ತವೆ). ಇದಕ್ಕೂ ಮುಂಚೆಯೇ ಬಹುಶಹ ಲಿಂಗದ ಮುಖಗಳು (ಭೀಟಾ ಲಿಂಗ ತೋರಿಸಿಕೊಡುವಂತೆ) ಕಾಣಿಸಿ ಕೊಂಡಿರ ಬೇಕು. ಇಲ್ಲಿ ಲಿಂಗ ಶಿಶ್ನ ರೂಪ ಆಗಲೇ ಕಡಿಮೆಯಾಗಿರುವುದನ್ನು ನೋಡ ಬಹುದು.

ಈ ಬಗೆಗಿನ ಪಾಶುಪತ ಮತ್ತು ಇತರ ಸಹಸ್ರಾರು ಶಾಸ್ತ್ರಗ(ಳ)’ಗೆ ವಶರಾಗಿ, ವೇದಬಾಹ್ಯರಾಗಿ ನರಕದಲ್ಲಿ ಬೀಳತ್ತಾರೆ ಎಂದು ಹೇಳುತ್ತದೆ (ಪಾಟಣಕರ 1946:332-335 (ಅಧ್ಯಾಯ-16)). ಹಂತ ಮೂರು: (ಕ್ರಿ ಶ 4-5 ನೆಯ ಶತಮಾನ) ಈ ಹಂತದಲ್ಲಿ ಮೇಲಿನ ತುದಿ ಮಾಯವಾಗುತ್ತದೆ ಮತ್ತು ಲಿಂಗದ ತುದಿ (ಲಿಂಗಾಗ್ರವು) ಬ್ರಹ್ಮಸೂತ್ರ ಗೆರೆಗಳಾಗಿ ಬದಲಾಗುತ್ತದೆ. ಅಲ್ಲದೆ ಲಿಂಗ ರೂಪದ ಕೆಳಗಿನ ಭಾಗ ಎಂಟು ಭುಜಗಳ ಸ್ವರೂಪ ಸಹ ಪಡೆಯುತ್ತದೆ (ಬಹುಶಹ ನಂತರದ ಪಠ್ಯಗಳು ಅವನ್ನು ರುದ್ರಭಾಗ, ವಿಷ್ಣುಭಾಗ ಮತ್ತು ಬ್ರಹ್ಮಭಾಗಗಳೆಂದು ಕರೆಯುವುದನ್ನು ಗಮನಿಸಿದರೆ ನೆಲದಲ್ಲಿನ ಭಾಗ ಚೌಕಕಾರದಲ್ಲಿರುವ ಸಾಧ್ಯತೆ ಇದೆ). ಕಾರಮಂಡದ (ಉತ್ತರ ಪ್ರದೇಶ) ಕುಮಾರಗುಪ್ತ ಕಾಲದ (ಶಾಸನದ ಕಾಲಮಾನ ಕ್ರಿ ಶ 436) ಲಿಂಗ (ಚಿತ್ರ 6) ಹಾಗೂ ಗೋವದ ಅರ್ವೆಲಂನ (ಚಿತ್ರ 7) ಲಿಂಗಗಳು ಇದಕ್ಕೆ ಉದಾಹರಣೆಗಳು.

ಈ ಬಗೆಗೆ ಕೆಲವು ಸಂಸ್ಕೃತ ಪಠ್ಯಗಳನ್ನು ಇಲ್ಲಿ ಚರ್ಚಿಸಲಾಗಿದೆ (ಮಹಾಭಾರತದ ಉಲ್ಲೇಖ ಈಗಾಗಲೇ ಮೇಲೆ ಬಂದಿದೆ). ವರಹಾಮಿಹರನ «ಬೃಹತ್‌ಸಂಹಿತೆ»ಯಲ್ಲಿ ಇಂತಹ ಲಿಂಗಗಳನ್ನು «ತ್ರಿದ» ಎಂದು ಕರೆಯಲಾಗಿದೆ, ಮೂಲಭಾಗವನ್ನು «ಚತುರಸ್ರಂ», ಮಧ್ಯ ಭಾಗವನ್ನು «ಅಷ್ಟಾಶ್ರಿ» ಮತ್ತು ತುದಿಯ ಭಾಗವನ್ನು «ವೃತ್ತಂ» ಎಂದು ಕರೆಯಲಾಗಿದೆ (Mitterwallner 1984:22). ಆದರೆ ಅದು ಬ್ರಹ್ಮಸೂತ್ರಗಳ ಬಗೆಗೆ ಏನನ್ನೂ ಹೇಳುವುದಿಲ್ಲ (Mitterwallner 1984:23). ಈ ಕೃತಿಯ ಕಾಲಮಾನವನ್ನು ಆರನೆಯ ಶತಮಾನದ ಪೂರ್ವಭಾಗ ಎಂದು ಅವರು ಉಲ್ಲೇಖಿಸುತ್ತಾರೆ (Mitterwallner 1984: Notes 48). ತುಸು ನಂತರದ್ದು 7ನೆಯ ಶತಮಾನದ ವಿಷ್ಣುಧರ್ಮೋತ್ತರ ಪುರಾಣವು ಈ ಮೂರು ಭಾಗಗಳನ್ನುವಿವರಿಸುತ್ತದೆ ಹಾಗೂ ಬ್ರಹ್ಮಸೂತ್ರಗಳ ಬಗೆಗೂ ಹೇಳುತ್ತದೆ (ವಿಷ್ಣುಧರ್ಮೋತ್ತರ ಪುರಾಣ ಸಂ.10:429-430).

ಹಂತ ನಾಲ್ಕು: (5ನೆಯ ಶತಮಾನದಿಂದ ಆರಂಭಿಕ ಮದ್ಯಕಾಲೀನ ಯುಗ) ಈ ಲಿಂಗಗಳನ್ನ ಮೂರು-ಭಾಗಗಳ-ಲಿಂಗ ಎಂದು ಕರೆಯ ಬಹುದು. ಸ್ಪಷ್ಟವಾಗಿಯಾಗಿ ದುಂಡನೆಯ ರುದ್ರಭಾಗ, 8 ಮೂಲೆಯ ವಿಷ್ಣುಭಾಗ ಮತ್ತು ಚೌಕಾಕಾರದ ಬ್ರಹ್ಮಭಾಗ ಕಂಡುಬರುತ್ತವೆ.. ಕುಮಾರಗುಪ್ತನ ಕಾಲದ 5ನೆಯ ಶತಮಾನದ ಕಾರಮಂಡದ ಲಿಂಗ(ಚಿತ್ರ 6) ಹಾಗೂ ಅರ್ವೆಲಂನ ಲಿಂಗವು (ಚಿತ್ರ 7) ಇದಕ್ಕೆ ಉದಾಹರಣೆಗಳು. (ಕೆಲವೊಮ್ಮೆ ರುದ್ರಭಾಗವನ್ನು ಪೂಜ್ಯಭಾಗ ಎಂದು ಸಹ ಕರೆಯಲಾಗುತ್ತದೆ), ಇಲ್ಲಿ ಬ್ರಹ್ಮಸೂತ್ರಗಳು ಸಹ ಕಾಣಬರುತ್ತವೆ.

ಹಂತ ಐದು: (ತಡವಾದ ಮದ್ಯಕಾಲೀನ ಯುಗದಿಂದ 20ನೆಯ ಶತಮಾನ) ಇಲ್ಲಿಂದ ಮುಂದೆ ಬ್ರಹ್ಮಸೂತ್ರದ ಆಳವು ಕಡಿಮೆಯಾಗಿ ಬಹುತೇಕ ಸಣ್ಣ ಗೆರೆಯಾಗಿ ಉಳಿಯುತ್ತದೆ ಮತ್ತು ಮೇಲಿನ ತುದಿ (ರುದ್ರಭಾಗ) ಹೆಚ್ಚು ಸಪಾಟಾಗುತ್ತದೆ. ಮಿಟ್ಟರ್‌ವಾಲ್ನರ್ ಗುರುತಿಸಿದ (ಚಿತ್ರ 1, ಏ) ವಿರುಪಾಕ್ಷ ದೇವಾಲಯ ಪಟ್ಟದಕಲ್‌ ಲಿಂಗದ ಬ್ರಹ್ಮಸೂತ್ರಗಳನ್ನು ಇವುಗಳೊಂದಿಗೆ ಹೋಲಿಸ ಬಹುದು.[6]

ಮಿಟ್ಟರ್‌ವಾಲ್ನರ್ ಅವರು ಲಿಂಗಗಳ ರುದ್ರಭಾಗದಲ್ಲಿ (ಪೂಜಾಭಾಗ) ಆದ ಬದಲಾವಣೆಗಳನ್ನು (ರೇಖಾ ಚಿತ್ರದ ರೂಪದಲ್ಲಿ) ಮೇಲಿನಂತೆ ಗುರಿತಿಸುತ್ತಾರೆ (ಚಿತ್ರ 15). ಬ್ರಹ್ಮಸೂತ್ರಗಳ ಸ್ವರೂಪ 6ನೆಯ ಶತಮಾನದಿಂದಲೇ ಈ ರೂಪ ಪಡೆಯತೊಡಗಿತೆಂದು ಮಿಟ್ಟರ್‌ವಾಲ್ನರ್ ಚಿತ್ರ ಸೂಚಿಸುತ್ತದೆ.

ಚಿತ್ರ 9 ಮತ್ತು 10 ಇದೇ ಕಾಲದ ಲಿಂಗಗಳು ಮತ್ತು ಬಾದಾಮಿ ಚಾಲುಕ್ಯರ ಕಾಲಮಾನದವು (ಬಹುತೇಕ ಕ್ರಿ ಶ 7-8 ಶತಮಾನ). ಬಾದಾಮಿ ಚಾಲುಕ್ಯರು ಚೌಕದ ಪೀಠವನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದರು ಎಂದು ಹೇಳುವ ಡಾ. (ಶ್ರೀಮತಿ) ಮೀನ ಎಂ ಮೊಹೈಟ್ ಮುಖ್ಯ ದೇವಾಲಯದ ವೃತ್ತಾಕಾರದ ಪೀಠ ಭೂಮಿಯಲ್ಲಿ ಹುದುಗಿದೆ, ಮಹಾಕೂಟದ ವಿರುಪಾಕ್ಷ ಹಾಗೂ ಮಲ್ಲಿಕಾರ್ಜುನ ದೇವಾಲಯಗಳೆರಡರ ಪೀಠವೂ ಚೌಕ ಎನ್ನುತ್ತಾರೆ (Mohite 2007:107).

ಬ್ರಹ್ಮಸೂತ್ರ ಹಾಗೂ ಪೀಠಗಳಲ್ಲಿನ ಬದಲಾವಣೆಗಳು ಬಾಗಶಹ ಪ್ರಾಂತೀಯವೂ, ಬಾಗಶಹ ಕಾಲಮಾನಕ್ಕೆ ಸಂಬಂಧಿಸಿರ ಬಹುದೆಂದು ಈ ಕಳಗಿನ ಚಿತ್ರ 11 ಮತ್ತು 12 ತೋರಿಸಿಕೊಡುತ್ತವೆ. ಈ ಎರಡೂ ಚಿತ್ರಗಳೂ ಕ್ರಿ ಶ 10-11 ಶತಮಾನದವು. ಮೊದಲನೆಯದು ದಕ್ಷಿಣದ ತಮಿಳುನಾಡಿನದು ಮತ್ತು ಎರಡನೆಯದು ಮದ್ಯಪ್ರದೇಶಕ್ಕೆ ಸೇರಿದುದು. ಇವುಗಳಲ್ಲಿನ ಬ್ರಹ್ಮಸೂತ್ರ ಮತ್ತು ಪಾರ್ಶವಸೂತ್ರಗಳ ಭಿನ್ನತೆಯನ್ನು ಗಮನಿಸ ಬಹುದು. ಪೀಠದಲ್ಲಿಯೂ ವ್ಯತ್ಯಾಸವಿದೆ.

ಗೋಪಿನಾಥ್ ‌ರಾವ್‌ ಅವರು ಲಿಂಗದ ಮೇಲೆ ಬ್ರಹ್ಮಸೂತ್ರ ಎಂಬ ಗೆರೆಗಳಿರುತ್ತವೆ, ಅವುಗಳಿಲ್ಲದೆ ಲಿಂಗಗಳು ಪೂರ್ಣವಾಗಲಾರವು ಮತ್ತು ಪೂಜ್ಯವೂ ಆಗಲಾರವು ಎನ್ನುತ್ತಾರೆ.. ಎರಡು ಲಂಬ ಗೆರೆಗಳಿರುತ್ತವೆ ಮತ್ತು ಅವುಗಳಿಲ್ಲದೆ ಲಿಂಗಗಳು ಪೂರ್ಣವಾಗಲಾರವು ಮತ್ತು ಪೂಜ್ಯವೂ ಆಗಲಾರವು ಎನ್ನುತ್ತಾರೆ (Gopinath Rao 1916:94).[7] ಆದರೆ ಹಲವು ವರ್ಗಗಳ (ದೈವಿಕ, ಆರ್ಶಕ ಮತ್ತು ಗಾಣಪ) ಲಿಂಗಗಳಲ್ಲಿ ಬ್ರಹ್ಮಸೂತ್ರಗಳಿರುವುದಿಲ್ಲ ಎಂಬುದರೆಡೆಯೂ ಸಹ ಗಮನ ಸೆಳೆಯುತ್ತಾರೆ. (ಗೋಪಿನಾಥ್‌ ರಾವ್, ಪು.)

ಲಿಂಗದ ರುದ್ರಭಾಗದ ನಡುವೆ ಎರಡು (ಕೆಲವೊಮ್ಮೆ ಒಂದು) ಲಂಬ ರೇಖೆಗಳು ಇರುತ್ತವೆ. ಇವುಗಳ ಎರಡೂ ಪಕ್ಕದಲ್ಲಿ ಎರಡು ರೇಖೆಗಳಿದ್ದು ಅವು ಲಂಬರೇಖೆಗಳ ಮೇಲ್ತುದಿಯಿಂದ ಆರಂಭವಾಗಿ ಬಾಗುತ್ತಾ ಕೆಳಗಿಳಿಯುತ್ತವೆ. (ಪಾರ್ಶವಸೂತ್ರ-ಚಿತ್ರ 13) ಈ ರೇಖೆಗಳು ಪೂಜಾಭಾಗದ ಕೊನೆಗೆ ತಲುಪಿ ಸಮತಲದಲ್ಲಿ ಹಿಂದೆ ಎರಡೂ ಕಡೆಯಿಂದ ಬಂದು ಸೇರುತ್ತವೆ (Gopinath Rao 1916:94-95).[8](ನೋಡಿ ಚಿತ್ರ 13-ಇಲ್ಲಿಯ ಚಿತ್ರ ಗೋಪಿನಾಥ್‌ ರಾವ್‌ ಅವರದು,- ಪ್ಲೇಟ್ X, Fig 1 ಮತ್ತು ವಿವರಣೆಗಳು ನನ್ನವು, ರಾವ್‌ ಅವರ ಕೃತಿಯನ್ನು ಆಧರಸಿ). ಮಿಟ್ಟರ್‌ವೆಲ್ನರ್ ಗೋಪಿನಾಥ್ ರಾವ್ ಅವರು ಹೇಳುವ ಲಂಬರೇಖೆಗಳನ್ನೇ ಬ್ರಹ್ಮಸೂತ್ರವೆಂದು ಕರೆದು, ಪಕ್ಕದ ಬಾಗು ರೇಖೆಗಳನ್ನು ಪಾರ್ಶವಸೂತ್ರ ಎನ್ನುತ್ತಾರೆ (ಮಿಟ್ಟರ್‌ವೆಲ್ನರ್: ಪು 23). ಗೋಪಿನಾಥ್ ರಾವ್ ಅವರು ಲಂಬರೇಖೆಗಳನ್ನು ಹೆಸರಿಸುವುದಿಲ್ಲವಾದರೂ ಅಡಿಟಿಪ್ಪಣಿಯಲ್ಲಿ ಅವನ್ನು ‘ಲಕ್ಷಣೋಧಾರಣ’, ‘ಮಣಿರೇಖೆ’, ‘ಪಾರ್ಶವಸೂತ್ರ’ ಎಂದು ಕರೆಯುವುದನ್ನು ಉಲ್ಲೇಖಿಸುತ್ತಾರೆ. (ಗೋಪಿನಾಥ್ ರಾವ್: ಪು 94) (ಗೊಂದಲಗಳಿಗೆ ಹೋಗದೆ ಹೆಸರಿಸುವ ಅಗತ್ಯದ ಒಂದೇ ಕಾರಣಕ್ಕೆ ಲಂಬರೇಖೆಗಳನ್ನು ‘ಮಣಿರೇಖೆ’ ಎಂತಲೂ ಬಾಗುವ ರೇಖೆಗಳನ್ನು ‘ಪಾರ್ಶವಸೂತ್ರ’ ಎಂದು, ಚಿತ್ರ 13 ರಲ್ಲಿ ಹೆಸರಿಸಿದ್ದೇನೆ.)

ಆಸಕ್ತಿದಾಯಕ ಅಂಶವೆಂದರೆ ಮಿಟ್ಟರ್‌ವಾಲ್ನ್ ಕ್ರಿ ಶ 7ನೆಯ ಶತಮಾನದ ನಂತರ ಪಾರ್ಶವಸೂತ್ರದ ಗೆರೆಗಳು ಮಣಿರೇಖೆಗಳ ಕೆಳಗೆ ಸೇರುವುದು ಆರಂಭವಾಯಿತು ಎಂಬುದರೆಡೆ ಗಮನ ಸೆಳೆಯುತ್ತಾರೆ. ಅದಕ್ಕೂ ಮುಂಚೆ ಪಾರ್ಶವಸೂತ್ರದ ಗೆರೆಗಳು ಲಂಬರೇಖೆಗಳ (ಮಣಿರೇಖೆಗಳು) ಮೇಲ್ತುದಿಯಲ್ಲಿ ಸೇರುತ್ತಿದ್ದವು (ಗಮನಿಸಿ, ಗೋಪಿನಾಥ್‌ ರಾವ್ ಅವರ ಚಿತ್ರದಲ್ಲಿ-ಚಿತ್ರ 13 ಈ ರೀತಿ ಇದೆ), (ರ್ವಾಂಗ್‌ಸುಪ್: ಪು 236)

ವಾಸ್ತವದಲ್ಲಿ ಈಗಾಗಲೇ ನೋಡಿದಂತೆ ಹಲವು ರೀತಿಯ ಸ್ಥಾವರಲಿಂಗಗಳಿಗೆ ಬ್ರಹ್ಮಸೂತ್ರಗಳಿರುವುದಿಲ್ಲ. ಇವಲ್ಲದೆ ಸಂಕೀರ್ಣ ಲಿಂಗಗಳು ಸಹ ಕ್ರಿಸ್ತ ಶಕದ ಆಜೂಬಾಜಿನಿಂದಲೇ ಕಂಡು ಬರುವುದು ದಾಖಲಾಗಿದೆ. ಅವುಗಳಲ್ಲಿ ಪ್ರಮುಖವಾದವು ಏಕಮುಖ ಲಿಂಗ, ಪಂಚಮುಖ ಲಿಂಗ, ಧಾರ ಲಿಂಗ, ಏಕೋತ್ತರ ಶತ ಲಿಂಗ, ಸಹಸ್ರ ಲಿಂಗ ಪ್ರಮುಖವಾದವು. ಇವುಗಳ ಸ್ವರೂಪ ಹಾಗೂ ಆಚರಣೆಗಳಿಗೂ ಇರುವ ಸಂಬಂಧ, ಅವುಗಳ ಪೀಠಗಳು ಬೇರೆಯದೇ ಅಧ್ಯಯನ ಬೇಡಬಹುದು.
ಲಿಂಗ ಪೀಠ

ಮಿಟ್ಟರ್‌ವೆಲ್ನರ್ ಅವರ ಲೇಖನ ಲಿಂಗ ಪೀಠಗಳ ಬಗೆಗೆ ಸ್ಥೂಲವಾಗಿ ಮಾತ್ರ ಚರ್ಚಿಸುತ್ತದೆ. ಪೀಠಗಳ ಬದಲಾವಣೆ ಹೆಚ್ಚು ಸಂಕೀರ್ಣ ಎಂದು ಅವರು ಭಾವಿಸುತ್ತಾರೆ. ಬಹುಶಹ ಕ್ರಿ ಶ 1ನೆಯ ಶತಮಾನದಿಂದಲೇ ಅಭಿಶೇಕಕ್ಕೆ ನಾಲದ ಅನುಕೂಲ ಮಾಡಿರಬೇಕೆಂದು ಅವರು ಭಾವಿಸುತ್ತಾರೆ (ಮಿಟ್ಟರ್‌ವಾಲ್ನರ್: ಪು. 25). ವಾಸ್ತವದಲ್ಲಿ ಇದಕ್ಕೆ ನಿರ್ದಿಷ್ಟವಾದ ಸಾಕ್ಷ ದುರ್ಲಬ. ಆದರೆ ಕ್ರಿ ಶ 7-8ನೆಯ ಶತಮಾನದಿಂದಲೇ ಪೀಠಗಳನ್ನು ಮತ್ತು ನಾಲ ಎರಡನ್ನೂ ನೋಡುತ್ತವೆ (ನೋಡಿ ಚಿತ್ರ 9 ಮತ್ತು 10). ನಿರ್ದಿಷ್ಟವಾಗಿ ಅಭಿಷೇಕದ ಉಬ್ಬು ಚಿತ್ರ ಕಜುರಹೊನಲ್ಲಿ ಕಂಡುಬರುತ್ತದೆ (ಚಿತ್ರ 16- ಸು ಕ್ರಿ ಶ 10-11ನೆಯ ಶತಮಾನ).

ಈ ಬಗೆಗೆ ಆಸಕ್ತಿದಾಯಕ ವಿವರಣೆ ನೀಡುವ ಬೆಟ್ಸಿ ವಿಲಿಯಮ್‌ಸನ್ ಅವರು ಚಿತ್ರ 9ರ ಉಬ್ಬು ಶಿಲ್ಪವನ್ನು ತ್ರಿ-ಡಿ (ಮೂರು ಆಯಾಮ)ಗಳಲ್ಲಿ ನೋಡಿದಾಗ ಚಿತ್ರದಲ್ಲಿ ವೃತ್ತದಂತೆ ಕಾಣುವ ಲಿಂಗ ಪೀಠವು ವಾಸ್ತವದಲ್ಲಿ ಯೋನಿಯಾಕಾರದಲ್ಲಿದೆ ಎಂದು ಹೇಳುತ್ತಾರೆ (Willaimson 2016, ನಿರ್ದಿಷ್ಟವಾಗಿ ಚಿತ್ರ ಮತ್ತು ಮಾಹಿತಿ ಬಳಸಲು ಅನುಮತಿ ನೀಡಿದ ಅವರಿಗೆ ಧನ್ಯವಾದಗಳು). «ಶಿವಲಿಂಗಗಳ ಆರಾಧನೆಗೆ ಮಾನ್ಯತೆ ಕೊಡುವಲ್ಲಿ ಸಂಪ್ರದಾಯಿಕ ಬ್ರಾಹ್ಮಣರ ಒಂದು ಗುಂಪು ವಿಳಂಬಮಾಡಿತು; ಬಹುಶಃ ಅಂತಹ ಮೂರ್ತಿಗಳ ಹಿನ್ನೆಲೆಯಾಗಿರುವ ಪರಿಕಲ್ಪನೆಯೇ ಕಾರಣ ಎಂದು ಮಹಾಭಾರತದಲ್ಲಿನ ಉಲ್ಲೇಖಗಳು ಸಾಧಿಸುವಂತೆ ಕಾಣುತ್ತದೆ» ಎನ್ನುತ್ತಾರೆ ಜೆ ಎನ್ ಬ್ಯಾನರ್ಜಿ (ಬ್ಯಾನರ್ಜಿ 1998:122). «ಆಗಮ ಪ್ರಾಮಾಣ್ಯ»ದ (10ನೆಯ ಶತಮಾನ) ಉದ್ಧೇಶವೇ ಪಂಚರಾತ್ರಕ್ಕೆ ವೈದಿಕ ಮಾನ್ಯತೆ ದೊರಕಿಸಿಕೊಡುವುದು. ಅಲ್ಲಿಯವರೆಗೂ (ಬಹುಶಹ ತುಸು ಕಾಲದನಂತರದ ವರೆಗೂ) ಪಂಚರಾತ್ರವನ್ನು, ಅದನ್ನು ಆಚರಿಸುವ ಬ್ರಾಹ್ಮಣರನ್ನು ವೈದಿಕ ಎಂದು ಪರಿಗಣಿಸಿರಲಿಲ್ಲ. ಇದು ಲಿಂಗಗಳನ್ನು ವೈದಿಕ ಎಂದು ಪೂರ್ಣವಾಗಿ ಒಪ್ಪಿತವಾಗುವ ಕಾಲಮಾನ ಎಷ್ಟು ತಡವಾಗಿರ ಬಹುದು ಎಂಬುದರ ಬಗೆಗೆ ಸುಳಿವು ನೀಡಬಲ್ಲದು. ಆದರೆ ಹಾಗಾಗುವದಕ್ಕೂ ಬಹಳ ಮುಂಚೆಯೇ ಪಂಚರಾತ್ರವನ್ನಾಗಲಿ, ಲಿಂಗಪೂಜೆಯಾನ್ನಾಗಲಿ (ಅಥವಾ ಹಲವಾರು ಪಂಥಗಳು ವೇದಸಮ್ಮತವಲ್ಲ ಎಂದು ಪರಿಗಣಿತವಾಗಿದಾಗ್ಯೂ) ಸಂಸ್ಕೃತ ಬಲ್ಲ ಕೆಲವು ವರ್ಗಗಳು ಬೆಂಬಲಿಸಿ, ಪೋಶಿಸಿಕೊಂಡು ಬರುತ್ತಿದ್ದವು ಎಂಬುದು ಸ್ಪಷ್ಟವೇ ಇದೆ. ‌ಈ ವಾಸ್ತವನ್ನೇ ಶಾಪದ ಕಥೆಯ ಮೂಲಕ ಕೂರ್ಮ ಪುರಾಣ ವಿವರಿಸಿರ ಬೇಕು ಎಂದು ತೋರುತ್ತದೆ.

ಪೀಠಗಳ ಬಗೆಗೆ ವಿವರ ಕೊಡುವ ಗೋಪಿನಾಥ್‌ ರಾವ್ ಅವರು ಅವು ಚೌಕ, ವೃತ್ತ, ಬಹುಬುಜಾಕೃತಿಗಳು (ಹೆಚ್ಚಾಗಿ 8, 6), ಅಂಡಾಕಾರ ಹೀಗೆ ಹಲವು ಆಕಾರಗಳನ್ನು ಹೊಂದಿರು ಬಹುದು ಎನ್ನುತ್ತಾರೆ. ಅಲ್ಲಿಯೇ ಅಡಿ ಟಿಪ್ಪಣಿಯಲ್ಲಿ ನಾಗರ, ದ್ರವಿಡ, ವೇಸರ (ಕ್ರಮವಾಗಿ ಉತ್ತರ ಭಾರತದ ಶೈಲಿ, ದಕ್ಷಿಣ ಭಾರತದ ಶೈಲಿ ಮತ್ತು ಮಿಶ್ರ ಶೈಲಿ) ಕ್ರಮವಾಗಿ ಚೌಕ, ಅಷ್ಟಬುಜ, ವೃತ್ತಾಕಾರ ಎಂದು ಮನಸಾರ ಹೇಳುತ್ತದೆ ಎಂದು ಉಲ್ಲೇಖಿಸುತ್ತಾರೆ. (ಗೋಪಿನಾಥ್ ರಾವ್, 99) ಆಗಮಗಳು ರುದ್ರಭಾಗ ಗಂಡು ಶಿಲೆ, ವಿಷ್ಣುಭಾಗ ಹೆಣ್ಣು ಶಿಲೆ ಮತ್ತು ಬ್ರಹ್ಮಭಾಗ ತಟಸ್ಥ ಶಿಲೆ ಎನ್ನುತ್ತಾ ಅವನ್ನು ವಿವರಿಸುತ್ತವೆ (Gopinth Rao 1916:102). ಮನಸಾರವು ಪೀಠದ ಪ್ರನಾಲವನ್ನು ಯೋನಿದ್ವಾರ ಎನ್ನುತ್ತದೆ (Acharya 1934:73). ಇದು ಪೀಠವು ಆರಂಭದಿಂದಲೇ ಶಿವ ಮತ್ತು ಶಕ್ತಿಗಳ ಮಿಲನ ಎಂಬ ಅರ್ಥ ಪಡೆದಿರ ಬಹುದಾದ ಸಾಧ್ಯತೆ ಇದೆ ಎಂದು ಸೂಚಿಸುತ್ತದೆ. ಆದರೆ ಯಾವುದು ಮೊದಲು ಶಿಲ್ಪವೇ, ಸಿದ್ಧಾಂತವೇ. ಬಹುಶಹ ಸದ್ಯಕ್ಕೆ ಈ ಪ್ರಶ್ನೆ ನಮಗೆ ಬೀಜ ವೃಕ್ಷಗಳಲ್ಲಿ ಯಾವುದು ಮೊದಲು ಎಂಬ ಪ್ರಶ್ನೆಯಂತೆ ಕಂಡರೆ ಅಚ್ಚರಿ ಇಲ್ಲ.

ಮೇಲೆ ನೋಡಿದಂತೆ ಬಹುತೇಕ ತಮಿಳು ನಾಡಿನ ಲಿಂಗಗಳ ಪೀಠಗಳು ವೃತ್ತಾಕಾರದವು. ಇದನ್ನು ಇತ್ತೀಚಿನ ತಮಿಳುನಾಡಿನ ವಿರಳ ಲಿಂಗ ಪೀಠ ಎಂಬ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕಾ ವರದಿ ಖಚಿತ ಪಡಿಸುತ್ತಾ ಸಾಮಾನ್ಯವಾಗಿ ಲಿಂಗ ಪೀಠಗಳು ವೃತ್ತಾಕಾರದಲ್ಲಿರುತ್ತವೆ. ಆದರೆ ಸದ್ರಸ್ (ಅಥವಾ ಚತುರಂಗಪಟ್ಟಿಣಂ)ನ ತಿರುವರೇಶ್ವರರ್ ಲಿಂಗದ ಪೀಠವು ಚೌಕಾಕಾರದಲ್ಲಿದೆ ಎನ್ನುತ್ತದೆ (Chitra 2017).

ಕರ್ನಾಟಕದ ಬಹುತೇಕ ಪೀಠಗಳು ಚೌಕಾಕಾರದವು ಆಗಿದ್ದಿರ ಬಹುದು. ಬಾದಾಮಿ ಚಾಲುಕ್ಯರ ಕಾಲದಲ್ಲಿ ಚೌಕಾಕರವಾಗಿರುವುದನ್ನು ಈಗಾಗಲೇ ಮೇಲೆ ನೋಡಿದ್ದೇವೆ. ಇದು ಕನಿಷ್ಟ 13ನೆಯ ಶತಮಾನದ ವರೆಗೂ ಮುಂದುವರೆದಂತೆ ಪ್ರಾಥಮಿಕ ಮಾಹಿತಿ ಹೇಳುತ್ತದೆ.[9]ಈ ಬಗೆಗಿನ ಹೆಚ್ಚಿನ ಅಧ್ಯಯನವು ಕರ್ನಾಟಕದಲ್ಲಿ ಯಾವ ರೀತಿಯ ಪ್ರಾಂತೀಯ ವ್ಯತ್ಯಾಸಗಳು ಕಂಡು ಬರುತ್ತವೆ, ಕಾಲಮಾನದಲ್ಲಿ ಅವು ಹೇಗೆ ಬದಲಾದವು ಎಂಬುದರ ಬಗೆಗೆ ಬೆಳಕು ಚೆಲ್ಲಬಲ್ಲದು. ಇಂತಹ ಬದಲಾವಣೆಗಳ ಮೂಲ ಎಲ್ಲಿದೆ ಎಂದು ಯಾರಾದರೂ ಅಧ್ಯಯನ ಮಾಡಿದ್ದಾರೆಯೇ ಎಂಬುದೂ ಸಹ ಕುತೂಹಲದ ವಿಷಯವೇ ಸರಿ.

ಟಿಪ್ಪಣಿಗಳು

1 ತಮ್ಮ ಚಿತ್ರಗಳನ್ನು ಬಳಸಲು ಒಪ್ಪಿಗೆ ಕೊಟ್ಟುದಲ್ಲದೆ, ಮಿಟ್ಟರ್‌ವಾಲ್ನರ್ ಅವರ ಲೇಖನದ ಮಾಹಿತಿ ನೀಡಿ ಸಹಕರಿಸಿದ ಡಾ. ವಾನ್ನಪತ್ ರ್ವಾಗ್‌ಸುಪ್ (Dr. Wannapat French Liveral Arts department , Ubonratchathani University,Thailand) ಹಾಗೂ ಲೇಖನದ ಬಗೆಗೆ ಚರ್ಚಿಸಿ ಹೆಚ್ಚಿನ ಮಾಹಿತಿ ಸೇರುಸುವಂತೆ ಪ್ರೇರೇಪಿಸಿದ, ತಿದ್ದಿದ ಡಾ. ತಿಪ್ಪೇಸ್ವಾಮಿ ಜೆ. ಎಮ್ ಹಾಗೂ ಡಾ. ವೀರಭದ್ರಯ್ಯ ಸಿ ಎಮ್ ಅವರ ಉಪಕಾರ ಸ್ಮರಿಸುತ್ತಾ.

2 ಸಂಸ್ಕೃತ-ಕನ್ನಡ ಶಬ್ದಕೋಶ , ಸಂ. 5 ಪು 2322-2323: ಲಿಂಗ ಪದಕ್ಕೆ ಅರ್ಥ-1. ಚಿಹ್ನೆ, ಗುರುತು, ಲಕ್ಷಣ, 2. ವೇಷ, ಸೋಗು, 3. ಶಬ್ದ ರೂಪದ ಲಿಂಗ, ಶಬ್ದದ ಸಾದುತ್ವವನ್ನು ತಿಳಿಸುವ ಶಬ್ದದಲ್ಲಿನ ಧರ್ಮ, 4. ಅನುಮಾನ, ವ್ಯಾಪ್ತಿಯ ಆಶ್ರಯ, 5. ರೋಗ, ರೋಗವನ್ನು ಸೂಚಿಸುವ ಲಕ್ಷಣ, 6. ಸಾಂಖ್ಯ ಮತೋಕ್ತವಾದ ಪ್ರಕೃತಿ, 7. ಸ್ತ್ರೀ ಪುರಷರ ಭೇದವನ್ನು ಸೂಚಿಸುವ ಚಿಹ್ನೆ, 8. ಪುರುಷನ ಜನನೇಂದ್ರಿಯ, 9. ಪರಶಿವನ ಒಂದು ಮೂರ್ತಿ, ಒಂದು ರೂಪ…. 13. ಹೇತು, ಕಾರಣ (ಸಂಸ್ಕೃತ-ಕನ್ನಡ ಶಬ್ದಕೋಶ- ಸಂ-5, ಚರ್ಕವರ್ತಿ ಶ್ರೀನಿವಾಸ್‌ ಗೋಪಾಲಾಯಾರ್ಯ, ಬಾಪ್ಕೋ ಪ್ರಕಾಶನ, 2007 (1984) ಬೆಂಗಳೂರು.

3 Yaska –wikipedia-https://en.wikipedia.org/wiki/Yāska, access date 2018-10-24-quotes as reference: The Editors of Encyclopaedia Britannica (2013). Ashtadhyayi, Work by Panini. Encyclopædia Britannica. Retrieved 23 October 2017., Quote: “Ashtadhyayi, Sanskrit Aṣṭādhyāyī (“Eight Chapters”), Sanskrit treatise on grammar written in the 6th to 5th century BCE by the Indian grammarian Panini.

4 ಬೇರೆ ಬೇರೆ ಆಗಮಗಳು ಬೇರೆ ಬೇರೆ ರೀತಿ ವರ್ಗೀಕರಿಸುವುದು ಕಾಣಬರುತ್ತದೆ-ಆದರೆ ಸ್ಥೂಲವಾಗಿ ಅವುಗಳ ವರ್ಗೀಕರಣ ಬಹುತೇಕ ಒಂದೇ ರೀತಿಯದೇ ಎನ್ನುತ್ತಾರೆ ಅವರು. ಕಾಮಿಕಾಗಮದಲ್ಲಿ 6 ಲಿಂಗಗಳ ವರ್ಗೀಕರಣವಿದ್ದು ಸ್ವಾಯಂಭುವ ಮತ್ತು ಬಾಣ ಲಿಂಗಗಳು ಹೆಚ್ಚುವರಿಯಾಗಿ ಬರುತ್ತವೆ.

5 Raungsup Wannapat Dr. (Mrs) French ಅವರ ಹಲವು ಚಿತ್ರಗಳನ್ನು ಮಿಟ್ಟರ್‌ವಾಲ್ನರ್ ಅವರ ಕೃತಿಯಿಂದ ತೆಗೆದುಕೊಂಡಿರುವುದಾಗಿ ಹೇಳುತ್ತಾರೆ. ಆದರೆ ನಾನು ನೇರವಾಗಿ ರ್ವಾಂಗಸುಪ್ ಅವರ ಕೃತಿಯಿಂದ ತೆಗೆದುಕೊಂಡ ಕಾರಣ ಅವರ ಹೆಸರು ಇಲ್ಲಿ ಬಳಸಿದ್ದೇನೆ.

6 ಮಿಟ್ಟರ್‌ವಾಲ್ನರ್ ಅವರು ಹಂತ ನಾಲ್ಕು ಮತ್ತು ಐದರಲ್ಲಿ ಬಳಸುವ ಮದ್ಯಕಾಲೀನ ಎಂಬ ಪರಿಕಲ್ಪನೆ, ಕಾಲಕಾಲಕ್ಕೆ ಬದಲಾಗುವುಂತೆ ಕಾಣುತ್ತದೆಯಾದ್ದರಿಂದ ಕಾಲಮಾನ ವಿಭಜನೆ ಗೊಂದಲಕ್ಕೆಕಾರಣವಾಗ ಬಹುದು. ಸ್ಥೂಲವಾಗಿ ಅವರು ಹನ್ನೊಂದನೆಯ ಶತಮಾನಕ್ಕೆ ವರ್ಗೀಕರಣವನ್ನು ಕೊನೆಗೊಳಿಸುತ್ತಾರೆ ಎಂದು ಭಾಸವಾಗುತ್ತದೆ, ಬಹುಶಹ ಇದು ಈ ಸಂಪ್ರದಾಯ ಸ್ಥಿರಗೊಂಡ ಕಾಲಮಾನ ಎಂದು ಭಾಸವಾಗುತ್ತದೆ.

7 ಆದರೆ ವಾಸ್ತವದಲ್ಲಿ ಅವರೇ ಸೂಚಿಸುವಂತೆ ಬೇರೆ ವರ್ಗದ ಲಿಂಗಗಳಲ್ಲಿ ಬ್ರಹ್ಮಸೂತ್ರಗಳು ಇರುವುದಿಲ್ಲ ಎಂದು ಗಮನ ಸೆಳೆಯುತ್ತಾರೆ. ಹೀಗಾಗಿ ಅವರ ಈ ನಿಯಮ ಬಹುಶಹ ಮಾನುಷ ಲಿಂಗಗಳಿಗೆ ಮಾತ್ರವಾಗಿದ್ದರ ಬಹುದು. ಅಲ್ಲಿಯೂ ನಿಯಮಕ್ಕೆ ಹೊರತಾದವು ಕೆಲವಾದರೂ ಕಂಡು ಬರುತ್ತವೆ.

8 ಸಿದ್ಧಾಂತ ಸಾರಾವಳಿ ತ್ರಿಲೋಚನ ಶಿವಾಚಾರ್ಯ ಅಥವಾ ಶಂಭು ಕಾಲಮಾನವನ್ನು ಕ್ರಿ ಶ 13 ಅಥವಾ 14 ಎನ್ನಲಾಗಿದೆ. ಖಚಿತವಾದ ಮಾಹಿತಿ ಇಲ್ಲ.

9 ಕಾಶಿವಿಶ್ವೇಶ್ವರಸ್ವಾಮಿ ದೇವಾಲಯ, ಲಕ್ಕುಂಡಿ, ಕ್ರಿ ಶ 1087, ಕಲ್ಯಾಣ ಚಾಲುಕ್ಯರದು, (ಲಿಂಗ ಪೀಠ ಚೌಕ) ಈಶ್ವರ ದೇವಾಲಯ, ಅರಸಿಕೆರೆ, ಹಾಸನ ಜಿಲ್ಲೆ ಕ್ರಿ ಶ 1220 ಮತ್ತು ಮಲ್ಲಿಕಾರ್ಜುನ ದೇವಾಲಯ, ಬಸರಾಳು, ಮಂಡ್ಯ, 1234 ಕ್ರಿ ಶ ಎರಡೂ ಹೊಯ್ಸಳರದು-ಚೌಕ ಲಿಂಗ ಪೀಠಗಳನ್ನು ಹೊಂದಿದ್ದರೆ (ವಿಡಿಯೋ ಮಾಹಿತಿ), ರಾಮತೀರ್ಥ ಶಿವಲಿಂಗ, ಹಲಸಿ಼, ವೃತ್ತಾಕಾರವಾಗಿದೆ (ಮಾಹಿತಿ ರ್ವಾಂಗಸುಪ್ ಅವರ ಚಿತ್ರ ಪು. 207)

ಉಲ್ಲೇಖಗಳು

Achrya, Prasanna Kumar, 1934 Indian Architecture according to Manasara Silpasastra, Manasar Series-Vol-II, Oriental Book Reprint Corporation.
Chakravarti Mahadev, 1986, The Concept of Rudra Siva through Ages, Motilal Banarasidas, Delhi.
Dasgupta, Surendranath, 1922, A History of Indian Philosophy, Vol I Cambridge University Press, London, -Pdf at archive.org; Dasgupta.
Dasgupta, Surendranath, 1952 (1940), A History of Indian Philosophy, Vol-III, Cambridge University Press, London.
Gopinath Rao T A, 1916, Elements of Hindu Iconography, Vol II Part I, The Law Printing House, Madras.
Kamana, Kumara@Gopanrya-twitter, 2018, Web-adress: https://twitter.com/gopanarya/status/849128714793230337, accessed on 24-10-2018.
Kane P V, 1941, History of Dharma Sastra, Bhandarkar Oriental Research Institute, Pune,
Mitterwallner v Gritli, 1984, ‘Evolution of the Linga’, in Discourses on Siva-Proceedings of a 5ymposium on the Nature of Religious Imagery, Ed. Michael W. Meister, 1984, Vakils, Feffer and Simons Ltd, Bombay.
Mohite M Meena, 2007, Mahakuta (Doctoral Thesis), Karnataka University, Dharward.
Parekh V S, 1978, The Iconography of Saiva deities from Gujarat, Volume 1, (Doctoral Thesis) , Maharaja Sayajirao University, Baroda.
Srinivasan, D. 1984. Unhinging Siva from the Indus Civilization. Journal of the Royal Asiatic Society of Great Britain and Ireland,(1), 77-89. Retrieved from http://wwwjstor.org/stable/25211627.
Vasu Sirisa Chadra (translator-English), 1897, Ashtadyayi of Panini, Vol V ), Sindhu Charana Bose, Benares .
Wannapat, Raungsup (Mrs French), 2013 The Emergence and Development of Brahmanism in Thailand with Special Reference to Iconography of Brahmanical Deities (doctoral thesis), Deccan College Post Graduate and Research institute, Pune
Willaimson, Betsy, 2016, (Blog: Title) Stories from the Road: Worship in Stone, Khajuraho, India, Available at: https://southasianphoto.com/2016/07/12/stories-from-the-road-worship-in-stone-khajuraho-india/, access date: 26-10-2018.
ಚರ್ಕವರ್ತಿ ಗೋಪಾಲಾಚಾರ್ಯ ಶ್ರೀನಿವಾಸ್‌ , 2007, ಸಂಸ್ಕೃತ-ಕನ್ನಡ ಶಬ್ದಕೋಶ- ಸಂ-5, , ಬಾಪ್ಕೋ ಪ್ರಕಾಶನ, 2007 (1984) ಬೆಂಗಳೂರು
ಪಾಟಣಕರ ಚಂದ್ರಶೇಖರ ಭಟ್ಟ (ಅನುವಾದಕರು, ಆಸ್ಥಾನ ವಿದ್ವಾನರು), 1946, ಕೂರ್ಮ ಪುರಾಣ, ಸಂ 1, ಶ್ರೀ ವಿನಾಯಕ ಪ್ರಿಟಿಂಗ್ ವರ್ಕ್ಸ್, ಮೈಸೂರು,
ಬ್ಯಾನರ್ಜಿ ಜೆ ಎನ್, 1998, ‘ಶೈವ ಧರ್ಮ’ (ವಿಭಾಗ ಇ-“ಅಧ್ಯಾಯ 19, ಧರ್ಮ ಮತ್ತು ದರ್ಶನ”ದಲ್ಲಿ) , ಅನುವಾದಕರು: ವಿ ಎನ್ ಶೇಷಗಿರಿರಾವ್, ಪ್ರ. ಸಂ. ಆರ್ ಸಿ ಮಜುಂದಾರ್ ನಲ್ಲಿ: ಸಾಮ್ರಾಜ್ಯ ಏಕತಾಯುಗ, 1998 (ಕನ್ನಡನುವಾದ ಪ್ರ. ಸಂ. ನರಸಿಂಹಮೂರ್ತಿ ಎ ವಿ), ಭಾರತೀಯ ವಿದ್ಯಾ ಭವನ, ಬೆಂಗಳೂರು.
ಮಧುರ ಚೆನ್ನ, 1930, ‘ಲಿಂಗ’ ರಲ್ಲಿ ಮಧುರ ಚೆನ್ನರ ಲೇಖನಗಳು, ಸಂ. ಗುರುಲಿಂಗ ಕಾಸಪೆ, ಕನ್ನಡ ವಿಶ್ವವಿದ್ಯಾಲಯ, ಹಂಪಿ.
ವಿಷ್ಣುಧರ್ಮೋತ್ತರ ಪುರಾಣ (ಕನ್ನಡ), ಸಂಪುಟ 10, ತೃತಿಯಖಂಡ, ಅಧ್ಯಾಯ 74, (ಅನುವಾದಕರು, ಪ್ರಕಾಶಕರ ಮಾಹಿತಿ ಲಭ್ಯವಿಲ್ಲ) Pdf file from: https://www.vyasaonline.com/vishnudharmottara-purana/, retrieved on 2018-10-20
ಸರ್ಕಾರ್ ಡಿ. ಸಿ., 1998, ‘ವೈಷ್ಣವ ಧರ್ಮ’ (ವಿಭಾಗ ಈ-“ಅಧ್ಯಾಯ 19, ಧರ್ಮ ಮತ್ತು ದರ್ಶನ”ದಲ್ಲಿ), ಅನುವಾದಕರು: ವಿ ಎನ್ ಶೇಷಗಿರಿರಾವ್, ಪ್ರ. ಸಂ. ಆರ್ ಸಿ ಮಜುಂದಾರ್, ನಲ್ಲಿ: ಸಾಮ್ರಾಜ್ಯ ಏಕತಾಯುಗ, 1998 (ಕನ್ನಡನುವಾದ ಪ್ರ. ಸಂ. ನರಸಿಂಹಮೂರ್ತಿ ಎ ವಿ), ಭಾರತೀಯ ವಿದ್ಯಾ ಭವನ, ಬೆಂಗಳೂರು.
ಸೌಪ್ತಿಕಪರ್ವ-ಐಶೀಕಪರ್ವ, ಮಹಾಭಾರತ, retrieved from: http://www.vyasaonline.com/ishika-parva-2/, on: 25-10-2018.


Leave a Reply

Your email address will not be published. Required fields are marked *


ಇತರ ಲೇಖನಗಳು